ಅಪಘಾತ: ಬೈಕ್ ಸವಾರ ಮೃತ್ಯು
Update: 2016-02-19 23:57 IST
ಪಡುಬಿದ್ರೆ, ಫೆ.19: ಪಡುಬಿದ್ರೆ- ಕಾರ್ಕಳ ಹೆದ್ದಾರಿಯ ಮುದರಂಗಡಿ ಕ್ರಾಸ್ ಬಳಿ ಶುಕ್ರವಾರ ಮಧ್ಯಾಹ್ನ ವೇಳೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ.
ಬೈಕುಗಳೆರಡು ಪರಸ್ಪರ ಢಿಕ್ಕಿಯಾಗಿ ಎದುರಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುರತ್ಕಲ್‌ನ ಗಣಪಯ್ಯ ಎಂಬವರ ಪುತ್ರ ಕೃಷ್ಣ ಮಯ್ಯ(19) ಮೃತಪಟ್ಟರೆ, ಇನ್ನೊಂದು ಬೈಕ್‌ನಲ್ಲಿದ್ದ ಮಂಗಳೂರು ಪಂಪ್‌ವೆಲ್‌ನ ಪ್ರಸನ್ನ ಎಂಬವರ ಪುತ್ರ ಪ್ರತೀಶ್ ಹಾಗೂ ಅದೇ ಊರಿನ ಜಾನ್ ಎಂಬವರ ಮಗ ಕ್ಲಿಂಟನ್ ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ರಭಸಕ್ಕೆ ಒಂದು ಬೈಕಿನ ಪೆಟ್ರೋಲ್ ಟ್ಯಾಂಕಿಗೆ ಬೆಂಕಿ ಹತ್ತಿ ಕೊಂಡಿತು. ಇದರಿಂದ ಬೈಕ್ ಸುಟ್ಟು ಹೋಗಿದೆ. ಕೂಡಲೇ ಆಗಮಿಸಿದ ಸ್ಥಳೀಯರು ಬೆಂಕಿ ನಂದಿಸಿದರು. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.