×
Ad

ಕಡಬ ಪರಿಸರದಲ್ಲಿ ಶಾಂತಿಯುತ ಮತದಾನ

Update: 2016-02-20 19:06 IST

ಕಡಬ, ಫೆ.20. ಜಿಲ್ಲಾ ಪಂಚಾಯತು ಹಾಗೂ ತಾಲೂಕು ಪಂಚಾಯತು ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಶನಿವಾರ ನಡೆದ ಮತದಾನವು ಕಡಬ ಪರಿಸರದಲ್ಲಿ ಶಾಂತಿಯುತವಾಗಿ ನಡೆಯಿತು. ಕೊಲ, ರಾಮಕುಂಜ, ಆಲಂಕಾರು, ಪೆರಾಬೆ, ಕುಂತೂರು, ಕೋಡಿಂಬಾಳ, ಕಡಬ, ಕುಟ್ರುಪ್ಪಾಡಿ, ಕೊಂಬಾರು, ಕೊಣಾಜೆ ಮೊದಲಾದ ಗ್ರಾಮದಲ್ಲಿ ಬೆಳಿಗ್ಗೆಯಿಂದಲೇ ಮತದಾರರು ಸಾಲುಗಟ್ಟಿ ನಿಂತು ತನ್ನ ಹಕ್ಕು ಚಲಾಯಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನವಾದರೂ, ಮಧ್ಯಾಹ್ನದ ಬಳಿಕ ಬಹುತೇಕ ಮಗಟ್ಟೆಗಳಲ್ಲಿ ನೀರಸ ವಾತಾವರಣ ಕಂಡುಬಂದಿತು. ಕೆಲವು ಮತಗಟ್ಟೆಯಲ್ಲಿ ಮತ ಚಲಾಯಿಸಲು ಆಗಮಿಸುವ ಮಂದಿಗೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮಜ್ಜಿಗೆ, ತಂಪು ಪಾನೀಯದ ವ್ಯವಸ್ಥೆ ಮಾಡಿದ್ದರು.

       ಕೊಲ ಗ್ರಾಮದ ವಳಕಡಮ ಸರಕಾರಿ ಶಾಲಾ ಮತಗಟ್ಟೆಯಲ್ಲಿ ಮತದಾನ ಆರಂಭಗೊಂಡಾಗ ಮತಯಂತ್ರದಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದಾಗಿ 2 ತಾಸು ತಡವಾಗಿ ಮತದಾನ ಆರಂಭವಾಯಿತು. ಕುಟ್ರುಪ್ಪಾಡಿ ಗ್ರಾಮದ ಸರಕಾರಿ ಶಾಲಾ ಮತಗಟ್ಟೆಯಲ್ಲಿ ತಾಲೂಕು ಪಂಚಾಯತಿನ ಮತಯಂತ್ರ ಮೊದಲಿಗಿಟ್ಟು ಬಳಿಕ ಜಿಲ್ಲಾ ಪಂಚಾಯಿತಿ ಮತಯಂತ್ರ ಇಡಲಾಗಿತ್ತು. ಇದನ್ನು ಗಮನಿಸಿದ ಮತದಾರು ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತಂದಾಗ ಅಧಿಕಾರಿಗಳು ಅದನ್ನು ಸರಿಯಾಗಿ ಜೋಡಿಸಿದರು. ಇದೇ ಮತಗಟ್ಟೆಯಲ್ಲಿ ಅಧಿಕಾರಿಗಳ ಎಡವಟ್ಟಿನಿಂದಾಗಿ ಮಹಿಳೆಯೋರ್ವರಿಗೆ ಎಡಗೈ ಹೆಬ್ಬರೆಳಿಗೆ ಶಾಯಿ ಹಾಕಲಾಗಿತ್ತು. ಈ ಸಂದರ್ಭ ಪಕ್ಷದ ಕೆಲವು ಪ್ರಮುಖರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ಪಕ್ಷದ ಕಾರ್ಯಕರ್ತರು ಮತದಾರರನ್ನು ಸಾಗಿಸಲು ವಾಹನವನ್ನು ಬಳಸಿಕೊಳ್ಳುತ್ತಿರುವುದು ಎಲ್ಲಾ ಮತಗಟ್ಟೆಗಳಲ್ಲಿ ಕಂಡುಬಂದಿತು. ಮತಗಟ್ಟೆ ಸಮೀಪದ ಮತದಾರರನ್ನು ಕೊನೆ ಕ್ಷಣದ ಓಲೈಕೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ಕಾರ್ಯಕರ್ತರು ನಿರತರಾಗಿದ್ದರು.

        ಮರ್ಧಾಳದಿಂದ ಕೆರ್ಮಾಯಿಗೆ ಸಂಪರ್ಕ ಕಲ್ಪಿಸುವ ಪ್ರದೇಶದ ರಸ್ತೆ ದುರಸ್ತಿಯಾಗಿಲ್ಲ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ನಾಗರೀಕರು ಮತದಾನ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದರು. ಚುನಾವಣೆಗೂ ಮೊದಲು ಸ್ಥಳಕ್ಕೆ ರಾಜಕೀಯ ಮುಖಂಡರು ತೆರಳಿ ಮಾತುಕತೆ ನಡೆಸಿ ಭರವಸೆ ನೀಡಿದ್ದರಿಂದ ಮತದಾನಕ್ಕೆ ಒಪ್ಪಿಕೊಂಡು ಮತದಾನ ಚಲಾಯಿಸಿದ್ದಾರೆ. ಆದರೆ ಚುನಾವಣಾ ದಿನದಂದು ಬಿಜೆಪಿ ಮಖಂಡರಾದ ಸೀತಾರಾಮ ಗೌಡ ಪೊಸವಳಿಕೆಯವರು ಕೆರ್ಮಾಯಿ ರಸ್ತೆಗೆ ಮಣ್ಣು ಹಾಕಿಸುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಜಿಲ್ಲಾ ಪಂಚಾಯತ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಯ್ಯದ್ ಮೀರಾ ಸಾಹೇಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಎಸ್.ಡಿ. ಶರಣಪ್ಪರವರಿಗೆ ದೂರು ನೀಡಿದ್ದರು. ಮೇಲಾಧಿಕಾರಿಯ ಆದೇಶದಂತೆ ಕಡಬ ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿ ಕಾಮಗಾರಿಯನ್ನು ತಡೆಹಿಡಿದರು. ಬಿಳಿನೆಲೆ, ಕೊಣಾಜೆ, ಕೊಂಬಾರು ಮೊದಲಾದ ನಕ್ಸಲ್ ಬಾದಿತ ಪ್ರದೇಶದಲ್ಲಿ ಯಾವೂದೆ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ರಕ್ಷಾ ಕವಚ ’ವಜ್ರ’ ವಾಹನದ ಗಸ್ತಿನೊಂದಿಗೆ ವಿಶೇಷ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

(ಕಡಬ ಸರಕಾರಿ ಮಾದರಿ ಶಾಲೆಯಲ್ಲಿ ನಡೆಯಲಾಗದ ಯುವಕನೋರ್ವನನ್ನು ಮತದಾನಕ್ಕಾಗಿ ಹೊತ್ತು ತಂದ ಸಂದರ್ಭ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News