ಪುತ್ತೂರು: ರಾಜಕೀಯ ಘರ್ಷಣೆ : ಬಿಜೆಪಿ ಬೆಂಬಲಿತ ಸಹಿತ ಇಬ್ಬರು ಆಸ್ಪತ್ರೆಗೆ ದಾಖಲು
ಪುತ್ತೂರು: ಪುತ್ತೂರು ತಾಲೂಕಿನ ಕುಂಜೂರುಪಂಜ ಮತಗಟ್ಟೆ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತರ ನಡುವೆ ಮಾತಿನ ಚಕಮಕಿ, ಹೊಕೈ ನಡೆದು ಬಳಿಕದ ಬೆಳವಣಿಗೆಯಲ್ಲಿ ಬಿಜೆಪಿ ಬೆಂಬಲಿತ ಆರ್ಯಾಪು ಗ್ರಾಮದ ಗೆಣಸಿನಕುಮೇರು ನಿವಾಸಿ ಶಿವಪ್ಪ ನಾಯ್ಕ(32) ಮತ್ತು ಆರ್ಯಾಪು ತಾ.ಪಂ ಕಾಂಗ್ರೆಸ್ ಅಭ್ಯರ್ಥಿ ಮಹಾಬಲ ರೈ ಅವರ ಸಹೋದರಿ ಪುತ್ತೂರು ನಗರದ ತೆಂಕಿಲ ನಿವಾಸಿ ಭವಾನಿ(35) ಎಂಬವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಿವಪ್ಪ ನಾಯ್ಕ ಅವರು ತಾನು ಮತದಾನ ಕೇಂದ್ರದ ಬಳಿಯಲ್ಲಿ ನಿಂತಿದ್ದ ವೇಳೆಯಲ್ಲಿ ತನ್ನ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಮಹಾಬಲ ರೈ, ಆತನ ಸಹೋದರ ಜಗನ್ನಾಥ ರೈ, ಪುತ್ರ ಸನತ್ ಮತ್ತು ಬಾವ ಪುರುಷೋತ್ತಮ ಎಂಬವರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಭವಾನಿ ಅವರು ತಾನು ತನ್ನ ಸಹೋದರ ಮಹಾಬಲ ರೈ ಅವರೊಂದಿಗೆ ಮಾತನಾಡಲೆಂದು ಕುಂಜೂರುಪಂಜಕ್ಕೆ ಆಗಮಿಸಿದ್ದು, ಆತನೊಂದಿಗೆ ಮಾತನಾಡಿ ಹಿಂತಿರುಗಿ ತೆಂಕಿಲಕ್ಕೆ ಹೋಗಲೆಂದು ಬಸ್ಸು ನಿಲ್ದಾಣದ ಬಳಿಯಲ್ಲಿ ನಿಂತಿದ್ದ ವೇಳೆಯಲ್ಲಿ ಅಲ್ಲಿಗೆ ಆಗಮಿಸಿದ ಶಿವಪ್ಪ ನಾಯ್ಕ ಅವರು ನಿನಗೆ ಇಲ್ಲೇನು ಕೆಲಸ ಎಂದು ಕೇಳಿ ತನ್ನ ಮೇಲೆ ಹಲ್ಲೆ ನಡೆಸಿ, ಸೀರೆಯನ್ನು ಎಳೆದು ಮಾನಭಂಗ ನಡೆಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಾರಿಯ ತಾ.ಪಂ ಚುನಾವಣೆಯಲ್ಲಿ ಶಿವಪ್ಪ ನಾಯ್ಕ ಅವರು ಮಹಾಬಲ ರೈ ವಿರುದ್ದ ಬಂಡಾಯವಾಗಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಬಳಿಕ ಬಿಜೆಪಿಯವರು ಅವರ ಮನವೊಲಿಸಿ ಸ್ಪರ್ಧಾ ಕಣದಿಂದ ಹಿಂದಕ್ಕೆ ಸರಿಸುವಲ್ಲಿ ಯಶಸ್ವಿಯಾಗಿದ್ದರು. ಚುನಾವಣೆಯ ಸಂದರ್ಭದಲ್ಲಿ ಶಿವಪ್ಪ ನಾಯ್ಕ ಅವರು ಮತಗಟ್ಟೆಯ ಬಳಿಯಲ್ಲಿ ಬಿಜೆಪಿ ಪರ ಮತಯಾಚನೆ ನಡೆಸಿದ್ದರು. ಸಂಜೆ ವೇಳೆಗೆ ಶಿವಪ್ಪ ನಾಯ್ಕ ಮತ್ತು ಮಹಾಬಲ ರೈ ಅವರ ನಡುವೆ ಮಾತಿನ ಚಕಮಕಿ ಮತ್ತು ಹೊಕೈ ನಡೆದಿತ್ತು.