ಲಿಬಿಯ: ಅಮೆರಿಕದ ವಾಯುದಾಳಿಗೆ 40 ಬಲಿ
ಟ್ರಿಪೋಲಿ,ಫೆ.20: ಪಶ್ಚಿಮ ಲಿಬಿಯದ ಸಂಬರತ ನಗರದಲ್ಲಿ ಅಮೆರಿಕ ನಡೆಸಿದ ವಿಮಾನದಾಳಿಯಲ್ಲಿ 40 ಮಂದಿ ಸಾವನ್ನಪ್ಪಿದ್ದು, 10 ಮಂದಿಗೆ ಗಂಭೀರ ಗಾಯಗಳಾಗಿವೆ. ಈ ಪ್ರಾಂತ್ಯದಲ್ಲಿ ಅಮೆರಿಕವು ಐಸಿಸ್ ಉಗ್ರರ ತರಬೇತಿ ಕೇಂದ್ರವನ್ನು ಗುರಿಯಾಗಿಸಿಕೊಂಡು ಆಕ್ರಮಣ ನಡೆದಿರುವುದಾಗಿ ವರದಿಯಾಗಿದೆ. ಸಂಬರತ ಟ್ಯುನಿಶಿಯದ ಗಡಿಗೆ ಸಮೀಪದಲ್ಲಿರುವ ನಗರವಾಗಿದೆ.ಈ ನಗರವು ಐಸಿಸ್ ಉಗ್ರರ ಸ್ವಾಧೀನದಲ್ಲಿದೆ. ಲಿಬಿಯದ ಸರ್ವಾಧಿಕಾರಿ ಮಅಮ್ಮರ್ ಗದ್ದಾಫಿಯ ಪತನದ ಬಳಿಕ ಲಿಬಿಯದಲ್ಲಿ ಅಂತರ್ಯುದ್ಧ ಭುಗಿಲೆದ್ದಿದೆ.
ಈ ಮಧ್ಯೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಶ್ ಕಾರ್ಟರ್ ಹೇಳಿಕೆಯೊಂದನ್ನು ನೀಡಿ, ಲಿಬಿಯದಲ್ಲಿ ಐಸಿಸ್ ವಿರುದ್ಧದ ಸಮರವು ಮುಂದುವರಿಯಲಿದೆಯೆಂದು ತಿಳಿಸಿದ್ದಾರೆ.
2014ರ ಆನಂತರ ಲಿಬಿಯದಲ್ಲಿ ಅಮೆರಿಕವು ಅನೇಕ ಬಾರಿ ವಾಯುದಾಳಿಗಳನ್ನು ನಡೆಸಿದೆ. ಕಳೆದ ವರ್ಷದ ಜುಲೈನಲ್ಲಿಟ್ಯುನಿಶಿಯ ಗಡಿಸಮೀಪದ ರಿಸಾರ್ಟ್ ಒಂದರ ಮೇಲೆ ಐಸಿಸ್ ನಡೆಸಿದ ಭೀಕರ ದಾಳಿಯಲ್ಲಿ 30 ಮಂದಿ ಯಾತ್ರಿಕರ ಸಾವನ್ನಪ್ಪಿದ್ದು, ಅವರಲ್ಲಿ 30 ಮಂದಿ ಬ್ರಿಟಿಶ್ ಪೌರರಾಗಿದ್ದಾರೆ.