ದೇಶ ಸೇವೆ ಮಾಡುವವರನ್ನು ಗೌರವಿಸಿ : ರವಿ ಅಪ್ಪಾಜಿ
ಸುಳ್ಯ, ಫೆ.20: ಸುಳ್ಯ ರೋಟರ್ಯಾಕ್ಟ್ ಕ್ಲಬ್ ಆಶ್ರಯದಲ್ಲಿ ರೋಟರ್ಯಾಕ್ಟ್ ವಲಯ ಸಮ್ಮೇಳನ ‘ಯುವ ಸಂಭ್ರಮ’ ಕಾರ್ಯಕ್ರಮವು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪಿ.ಡಿ.ಜಿ.ಆರ್.ಐ ಡಾ. ರವಿ ಅಪ್ಪಾಜಿ, ಇಂದಿನ ಯುವಸಮೂಹ ಹೆಚ್ಚು ಅದೃಷ್ಟವಂತರು. ಹಿಂದೆಂದಿಗಿಂತಲೂ ಅವಕಾಶಗಳು ಅಧಿಕವಾಗಿವೆ. ದೇಶಸೇವೆ ಮಾಡುವವರನ್ನು ಗೌರವಿಸುವ, ಅವರಿಗಾಗಿ ಸಮಯ ಮೀಸಲಿಡುವ ಕಾರ್ಯ ಯುವಶಕ್ತಿಯಿಂದಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಸ್ವಾರ್ಥಕ್ಕಾಗಿ ಯುವಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲಸ ನಡೆಯುತ್ತಿದೆ. ಯುವಶಕ್ತಿ ಯಾರದೋ ಸ್ವಾರ್ಥಕ್ಕೆ ಬಲಿ ಪಶುಗಳಾಗದೆ ಯೋಚಿಸಿ ಮುಂದು ವರಿಯಬೇಕು ಎಂದರು.
ಸವಣೂರು ವಿದ್ಯಾರಶ್ಮಿ ವಿದ್ಯಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು, ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ರೋಟರ್ಯಾಕ್ಟ್ ಉಪ ಡಿಆರ್‌ಸಿಸಿ ಗಣೇಶ್ ಮಲ್ಯ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಬೆಳ್ಯಪ್ಪಗೌಡ, ನಿಕಟ ಪೂರ್ವ ಡಿಆರ್‌ಆರ್ ಶೈಲೇಂದ್ರ ರಾವ್, ಗುತ್ತಿಗಾರು ರಬ್ಬರ್ ಸೊಸೈಟಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಡಿಆರ್‌ಆರ್ ಮಹಾದೇವ ಸ್ವಾಮಿ, ಕಾಮಧೇನು ಗ್ರೂಪ್ಸ್ ಮಾಲಕ ಎಂ.ಮಾಧವ ಗೌಡ ಕಾಮಧೇನು, ಉದ್ಯಮಿ ರಾಮಚಂದ್ರ ಪಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸುಳ್ಯ ರೋಟರ್ಯಾಕ್ಟ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ವಲಯ ಕಾರ್ಯದರ್ಶಿ ಪಿ.ವಿ.ಸುಬ್ರಮಣಿ, ರೋಟರ್ಯಾಕ್ಟ್ ಕಾರ್ಯದರ್ಶಿ ಮಂಜುನಾಥ ಕಂದಡ್ಕ, ಸಮ್ಮೇಳನದ ಅಧ್ಯಕ್ಷ ಶಿವಪ್ರಸಾದ್ ಕೇರ್ಪಳ, ಸಮ್ಮೇಳನ ಕಾರ್ಯದರ್ಶಿ ಶಿವಪ್ರಸಾದ್ ಕೆ.ವಿ., ಅವಾರ್ಡ್ ಕಮಿಟಿ ಅಧ್ಯಕ್ಷ ಸುಮಿತ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಉಪಸ್ಥಿತರಿದ್ದರು. ರೋಟರ್ಯಾಕ್ಟ್ ಕ್ಲಬ್ ವಲಯಾಧ್ಯಕ್ಷ ಕೆ.ಟಿ.ಬಾಗೀಶ್ ಸ್ವಾಗತಿಸಿದರು. ಅಧ್ಯಕ್ಷ ಜೆ.ಕೆ. ರೈ ಪ್ರಾಸ್ತಾವಿಸಿದರು. ಹರ್ಷಿತ್ ಪಡ್ರೆ ಕಾರ್ಯಕ್ರಮ ನಿರೂಪಿಸಿದರು.