ಗ್ವಾಲಿಯರ್ ಜೀಪು ಟ್ರಕ್ ಢಿಕ್ಕಿ: ಹನ್ನೊಂದು ಸಾವು, ಆರು ಮಂದಿಗೆ ಗಾಯ
ಗ್ವಾಲಿಯರ್: ಇಲ್ಲಿನ ಹೈವೆ ಪರಾರಿ ಎಂಬಲ್ಲಿ ರವಿವಾರ ರಾತ್ರಿ ಜನರು ತುಂಬಿದ್ದ ಜೀಪೊಂದಕ್ಕೆ ರಾಂಗ್ ಸೈಡ್‌ನಿಂದ ಬಂದ ಟ್ರಕ್‌ವೊಂದು ಢಿಕ್ಕಿ ಹೊಡೆದ ಪರಿಣಾಮ ಹನ್ನೊಂದು ಮಂದಿ ಮೃತರಾಗಿದ್ದಾರೆ. ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮೃತರಲ್ಲಿ ಒಬ್ಬಳು ಮಹಿಳೆ ಮತ್ತು ಬಾಲಕಿ ಕೂಡ ಸೇರಿದ್ದಾರೆ ಹಾಗೂ ಗಾಯಾಳುಗಳಲ್ಲಿ ನಾಲ್ವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ರವಿವಾರ ರಾತ್ರೆ ಸುಮಾರು ಒಂಬತ್ತು ಗಂಟೆ ವೇಳೆಗೆ ಈ ದುರ್ಘಟನೆ ಗ್ವಾಲಿಯರ್ ರಾಧಾಸ್ವಾಮಿ ಆಶ್ರಮದ ಬಳಿ ನಡೆದಿದೆ.
ಅಪಘಾತ ಭಾರೀ ಬಿರುಸಿನಿಂದ ನಡೆದಿದ್ದು ಜೀಪ್‌ನ ಟಾಪ್ ಕಿತ್ತು ಹೋಗಿ ಪಲ್ಟಿಯಾಗಿತ್ತು. ಅಪಘಾತದ ಸುದ್ದಿ ತಿಳಿದು ಹತ್ತಿರದ ಗ್ರಾಮದ ಜನರು ಅಲ್ಲಿಗೆ ಬಂದಿದ್ದರು. ಅವರೇ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದರು. ಪೊಲೀಸರು ಗ್ರಾಮೀಣರ ನೆರವಿನಿಂದ ಜೀಪಿನಲ್ಲಿ ಸಿಲುಕಿಕೊಂಡವರ ದೇಹವನ್ನು ಹೊರತೆಗೆದು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಹನ್ನೊಂದು ಮಂದಿ ಮೃತರಾಗಿದ್ದಾರೆಂದು ವೈದ್ಯರು ಘೋಷಿಸಿದ್ದು ಉಳಿದ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದರು.