ಸುಳ್ಯ: ಕಸ ವಿಲೇವಾರಿ ಜಾಗದಲ್ಲಿ ಕೋಳಿ ತ್ಯಾಜ್ಯ, ಊರವರಿಂದ ತಡೆ
ಸುಳ್ಯ: ಕಲ್ಚರ್ಪೆಯಲ್ಲಿ ನಗರದ ಕಸವನ್ನು ಹಾಕಲೆಂದು ಮೀಸಲಿಟ್ಟಿರುವ ಜಾಗದಲ್ಲಿ ಚಿಕನ್ ಸೆಂಟರ್‌ನವರು ಕೋಳಿ ತ್ಯಾಜ್ಯ ಎಸೆಯುವುದನ್ನು ಸ್ಥಳೀಯರು ಪತ್ತೆ ಮಾಡಿದ ಘಟನೆ ನಡೆದಿದೆ.
ಆದಿತ್ಯವಾರ ರಾತ್ರಿ ಸುಮಾರು 8 ಗಂಟೆಯ ಅಟೋ ರಿಕ್ಷಾವೊಂದು ಕಲ್ಚರ್ಪೆ ಕಸ ಹಾಕುವಲ್ಲಿಗೆ ಬಂತು. ಇದನ್ನು ನೋಡಿದ ಸ್ಥಳೀಯರು ಆ ರಿಕ್ಷಾವನ್ನು ತಡೆದು ವಿಚಾರಿಸಿದರು. ರಿಕ್ಷಾವನ್ನು ಪರಿಶೀಲಿಸಿದಾಗ ಅದರಲ್ಲಿ ಕೋಳಿ ತ್ಯಾಜ್ಯ ಇರುವುದು ಕಂಡುಬಂತು. ಆಲೆಟ್ಟಿ ಗ್ರಾ.ಪಂ. ಮಾಜಿ ಸದಸ್ಯ ಯೂಸುಫ್ ಅಂಜಿಕಾರ್ ಮತ್ತಿತರರು ಸ್ಥಳಕ್ಕೆ ಬಂದು ರಿಕ್ಷಾ ಚಾಲಕ ನಾಗರಾಜ್ ಎಂಬಾತನನ್ನು ವಿಚಾರಿಸಿದಾಗ ಗಾಂಧಿನಗರದ ಪ್ರಗತಿ ಚಿಕನ್ ಸೆಂಟರ್‌ನವರು ಈ ಕಸವನ್ನು ಇಲ್ಲಿಗೆ ಹಾಕಿ ಬರಲು ತಿಳಿಸಿದ್ದು, ಅದರಂತೆ ನಾವು ಬಂದಿದ್ದೇವೆ ಎಂದು ಹೇಳಿದರು. ಸ್ಥಳೀಯರು ಅಟೋ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ವಿಷಯ ತಿಳಿದು 50ಕ್ಕೂ ಹೆಚ್ಚು ಜನ ಸೇರಿದರು, ಪೋಲಿಸರೂ ಬಂದರು. ಸ್ವಲ್ಪ ಸಮಯದಲ್ಲಿ ನಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಬಂದರು. ಮೊನ್ನೆಯಷ್ಟೆ ನ.ಪಂ.ನಲ್ಲಿ ಸಭೆ ಕರೆದು ಕೋಳಿ ತ್ಯಾಜ್ಯವನ್ನು ಎಸೆಯದಂತೆ ಕೋಳಿ ಅಂಗಡಿಯವರಿಗೆ ಸೂಚನೆ ನೀಡಿದರೂ ಈ ರೀತಿ ಮಾಡಿದ್ದಾರೆ. ಇಲ್ಲಿ ಕೋಳಿ ತ್ಯಾಜ್ಯ ಎಸೆದ ಈ ಅಂಗಡಿಯವರ ಲೈಸೆನ್ಸ್ ಕ್ಯಾನ್ಸಲ್ ಮಾಡುತ್ತೇವೆ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಅಲ್ಲಿ ಸೇರಿದ ಜನರಲ್ಲಿ ಹೇಳಿದರು. ಬಳಿಕ ಪೊಲೀಸರು ತ್ಯಾಜ್ಯವನ್ನು ತಂದ ರಿಕ್ಷಾ ಹಾಗೂ ಎಸೆಯಲು ಬಂದವರನ್ನು ಪೋಲೀಸ್ ಠಾಣೆಗೆ ಕರೆತಂದರು. ಕಲ್ಚರ್ಪೆಯಲ್ಲಿ ನಗರದ ಕಸ ಹಾಕುವುದನ್ನು ದಯವಿಟ್ಟು ನಿಲ್ಲಿಸಿ. ಇಲ್ಲಿ ಈಗಲೇ ಮಕ್ಕಳಿಗೆ ಚರ್ಮರೋಗ ಬರುತ್ತಿದೆ. ಬಾವಿಯ ನೀರು ಕಪ್ಪಾಗಿದೆ. ಮರಗಳು ಒಣಗುತ್ತಿವೆ ಎಂದು ಸ್ಥಳೀಯರು ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆಯವರಲ್ಲಿ ತಮ್ಮ ಅಹವಾಲು ವ್ಯಕ್ತಪಡಿಸಿದರು. ನಗರದ ಕಸವನ್ನು ಹಾಕಲು ಬೇರೆ ಕಡೆ ಜಾಗ ಇಲ್ಲ. ಅದು ಇಲ್ಲೇ ಹಾಕುತ್ತೇವೆ. ನಮಗೆ ಇದೇ ಜಾಗ ಇರುವುದು ಎಂದು ಪ್ರಕಾಶ್ ಹೆಗ್ಡೆ ಹೇಳಿದರು. ನೀವು ವೈಜ್ಞಾನಿಕ ರೀತಿಯಲ್ಲಿ ಮಾಡುತ್ತೀರಿ ಎಂದು ಹೇಳಿ ವರುಷಗಳೇ ಕಳೆಯಿತು. ಆದರೆ ಯಾವುದೇ ವೈಜ್ಞಾನಿಕತೆ ಇಲ್ಲಿ ಅಳವಡಿಸಿಲ್ಲ ಎಂದು ಸ್ಥಳೀಯರು ಹೇಳಿದಾಗ "ಅದಕ್ಕಾಗಿ 60 ಲಕ್ಷ ರೂ ಇರಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಆದ ಕೂಡಲೇ ವ್ಯವಸ್ಥೆ ಸರಿಯಾಗುತ್ತದೆ ಎಂದು ಅಧ್ಯಕ್ಷರು ಹೇಳಿ ಅಲ್ಲಿಂದ ಬಂದರು.