ಪಾಂಪೋರ್‌ನಲ್ಲಿ ಕಾರ್ಯಾಚರಣೆ ಅಂತ್ಯ; ಮೂವರು ಉಗ್ರರ ಹತ್ಯೆ
ಶ್ರೀನಗರ ಫೆ.22: ಜಮ್ಮು-ಕಾಶ್ಮೀರದ ಪಾಂಪೋರ್‌ನಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರನ್ನು ಕೊಲ್ಲಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸತತ 48 ಗಂಟೆಗಳ ಕಾರ್ಯಾಚರಣೆಯಲ್ಲಿ ಸರಕಾರಿ ಕಟ್ಟಡದಲ್ಲಿ ಅಡಗಿದ್ದ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದರೆನ್ನಲಾದ ಮೂವರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ. ಇದೇ ವೇಳೆ ಉಗ್ರರೊಂದಿಗೆ ನಡೆಸಿದ ಗುಂಡಿನ ಚಕಮಕಿಯಲ್ಲಿ ಹಾಗೂ ಓರ್ವ ನಾಗರಿಕ ,ಆರ್ಮಿಯ ಇಬ್ಬರು ಕ್ಯಾಪ್ಟನ್‌ಗಳು , ಓರ್ವ ಜವಾನ, ಇಬ್ಬರು ಅರೆಸೈನಿಕ ಪಡೆಯ ಯೋಧರು ಸೇರಿದಂತೆ ಆರು ಮಂದಿ ಬಲಿಯಾಗಿದ್ಧಾರೆ.
ಕ್ಯಾಪ್ಟನ್ ತುಷಾರ್ ಮಹಾಜನ್ , ಕ್ಯಾಪ್ಟನ್ ಪವನ್ ಕುಮಾರ್, ಇಬ್ಬರು ಸಿಆರ್‌ಎಫ್ ಹೆಡ್ ಕಾನ್ ಸ್ಟೇಬಲ್‌ಗಳಾದ ಆರ್‌ಕೆ ರಾಣಾ ಮತ್ತು ಭೋಲಾ ಸಿಂಗ್, ಇಡಿಐ ಉದ್ಯೋಗಿ ಅಬ್ದುಲ್ ಘನಿ ಮಿರ್ ಬಲಿಯಾಗಿದ್ದಾರೆ.
ಶನಿವಾರ ಮಧ್ಯಾಹ್ನ ಸಿಆರ್‌ಪಿಎಫ್ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ ಉಗ್ರರು ಇಬ್ಬರು ಯೋಧರನ್ನು ಕೊಂದಿದ್ದರು.ಪಾಂಪೋರ್ ನಲ್ಲಿನ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆಯ ಕಟ್ಟಡಕ್ಕೆ ನುಗ್ಗಿದ್ದ ಉಗ್ರರು ಇಡಿಐ ಉದ್ಯೋಗಿ ಅಬ್ದುಲ್ ಘನಿ ಮಿರ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಕಟ್ಟಡದಲ್ಲಿದ್ದ 100 ಮಂದಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಕಾರ್ಯಾಚರಣೆ ನಡೆಸಲಾಗಿತ್ತು.
ರವಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಪವನ್ ಕುಮಾರ್ , ಕ್ಯಾಪ್ಟನ್ ತುಷಾರ್ ಮಹಾಜನ್ ಮತ್ತು ಯೋಧ ಓಂಪ್ರಕಾಶ್ ಎಂಬುವರಿಗೆ ಗುಂಡೇಟಿನಿಂದ ಗಾಯವಾಗಿತ್ತು. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.
ಶ್ರೀನಗರದಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಮೊದಲ ಬಾರಿ ಕಟ್ಟಡವೊಂದನ್ನು ಆಕ್ರಮಿಸಿಕೊಂಡಿದ್ದ ಉಗ್ರರನ್ನು ಸತತ ಕಾರ್ಯಾಚರಣೆಯ ಮೂಲಕ ಭದ್ರತಾ ಪಡೆ ಹೊಡೆದುರುಳಿಸಿದೆ.