×
Ad

ಐಎಸ್‌ಪಿಆರ್‌ಎಲ್‌ನ ಪೈಪ್‌ಲೈನ್ ಕಾಮಗಾರಿ ಆರಂಭಿಸುವ ಜಿಲ್ಲಾಡಳಿತದ ತೀರ್ಮಾನಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ

Update: 2016-02-22 19:27 IST

 ಮಂಗಳೂರು.ಫೆ.22:ಎಂಆರ್‌ಪಿಎಲ್ ಮತ್ತು ಎಸ್‌ಇಝಡ್‌ನಿಂದ ಉಂಟಾಗುತ್ತಿರುವ ಭಾರಿ ಪರಿಸರ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳದೆ ಇದೀಗ ಐಎಸ್‌ಪಿಆರ್‌ಎಲ್‌ನ ಪೈಪ್‌ಲೈನ್ ಕಾಮಗಾರಿ ಆರಂಭಿಸುವ ಜಿಲ್ಲಾಡಳಿತದ ತೀರ್ಮಾನಕ್ಕೆ ಭಾನುವಾರ ನಡೆದ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ನೇತೃತ್ವದ ಗ್ರಾಮಸ್ಥರ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

 ಎಂಆರ್‌ಪಿಎಲ್‌ನ ಕೋಕ್ ಸಲ್ಫರ್ ಘಟಕ ಆರಂಭವಾದಂದಿನಿಂದಲೂ ಜೋಕಟ್ಟೆ ಗ್ರಾಮಸ್ಥರು ತೀವ್ರ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಸ್ವತಃ ಸ್ಥಳ ಪರಿಶೀಲನೆ ನಡೆಸಿದ್ದು, ಎಂಆರ್‌ಪಿಎಲ್‌ನಿಂದ ಮಾಲಿನ್ಯ ಉಂಟಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಈ ಮಾಲಿನ್ಯ ತಡೆಯಬೇಕಾದರೆ ಕೋಕ್ ಸಲ್ಫರ್ ಘಟಕವನ್ನು ಈಗ ಇರುವ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಬೇಕು. ಆದರೆ ಈವರೆಗೆ ಗ್ರಾಮಸ್ಥರ ಯಾವುದೇ ಬೇಡಿಕೆಗಳಿಗೆ ಮತ್ತು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಈ ನಡುವೆ ಭೂಗತ ತೈಲ ಸಂಗ್ರಹಾಗಾರದ ಪೈಪ್‌ಲೈನ್ ಕಾಮಗಾರಿಯನ್ನು ಆರಂಭಿಸಲು ಕಂಪೆನಿ ಮುಂದಾಗಿದೆ. ಗ್ರಾಮಸ್ಥರಿಗೆ ಉಂಟಾಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳದೆ ಪೈಪ್‌ಲೈನ್ ಕಾಮಗಾರಿಯನ್ನು ನಡೆಸಲು ಬಿಡುವುದಿಲ್ಲ ಎಂದು ಹೋರಾಟಗಾರರು ಮತ್ತು ಗ್ರಾಮಸ್ಥರು ಒಕ್ಕೊರಲಿನಿಂದ ಪ್ರತಿಜ್ಞೆ ಮಾಡಿದರು.

 ಡಿವೈಎಫ್‌ಐ ರಾಜ್ಯಧ್ಯಕ್ಷ ಹೋರಾಟ ಸಮಿತಿಯ ಸಂಚಾಲಕ ಬಿ.ಎಸ್. ಹುಸೇನ್, ಸಹ ಸಂಚಾಲಕ ಅಬೂಬಕ್ಕರ್ ಬಾವಾ, ಷರೀಫ್, ಗ್ರಾ.ಪಂ. ಉಪಾಧ್ಯಕ್ಷ ಸಂಶುದ್ದೀನ್, ಸ್ಥಳೀಯ ಮುಖಂಡರಾದ ಸೀತಾರಾಮ ಆಚಾರ್ಯ, ಡೊಂಬಯ್ಯ ಪೂಜಾರಿ, ಜೆ.ಎಂ. ಹಾಜಿ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News