ಮಂಗಳೂರು : ವೆನ್‌ಲಾಕ್ ಔಷಧ ಖರೀದಿಗೆ ರೂ.1.94ಕೋಟಿಗೆ ಅನುಮೋದನೆ
ಮಂಗಳೂರು.ಫೆ.22:ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಇಲ್ಲಿಗೆ ಚಿಕಿತ್ಸೆಗಾಗಿ ಆಗಮಿಸುವ ಒಳ ಹಾಗೂ ಹೊರ ರೋಗಿಗಳಿಗೆ ಉಚಿತವಾಗಿ ತರಿಸುವ ಔಷಧಗಳನ್ನು ಖರೀದಿಸುವ ಟೆಂಡರ್ ಅವಧಿಯು 2015 ರ ಜನವರಿಯಲ್ಲಿ ಮುಗಿದಿರುವುದರಿಂದ ಸದರಿ ಸಾಲಿನಲ್ಲಿ ರೂ.1,94,93,053ರ ಮೌಲ್ಯದ ಔಷಧ ಖರೀದಿಗಾಗಿ ಟೆಂಡರ್ ಆಹ್ವಾನಿಸಲು ಇಂದು ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಸಮಿತಿ ಅಧ್ಯಕ್ಷ ಎ.ಬಿ.ಇಬ್ರಾಹೀಂ ಅನುಮೋದನೆ ನೀಡಿದರು.
ಮಹಾನಗರಪಾಲಿಕೆ ವತಿಯಿಂದ 20 ಹಾಸಿಗೆ ಸಾಮರ್ಥ್ಯದ ವಾರ್ಡ್ ಹಾಗೂ ವಿಕಲಚೇತನ ಸ್ನೇಹಿ ಶೌಚಾಲಯ ನಿರ್ಮಾಣಕ್ಕೆ ಮಹಾನಗರಪಾಲಿಕೆ ರೂ.26ಲಕ್ಷ ನೀಡಿದ್ದು ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಸದರಿ ಕಾಮಗಾರಿಯನ್ನು ಇನ್ನು 15 ದಿನಗಳೊಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದವರಿಗೆ ಸೂಚಿಸಿದರು.
ಫಿಸಿಯೋಥೆರೆಫಿ ವಿಭಾಗದಲ್ಲಿ ರೋಟರಿ ಕ್ಲಬ್, ಮಂಗಳೂರು ಇವರ ವತಿಯಿಂದ ಸುಮಾರು ರೂ.25ಲಕ್ಷ ಉಪಕರಣಗಳನ್ನು ಕೊಡುಗೆಯಾಗಿ ನೀಡಲು ಮುಂದೆ ಬಂದಿದೆ. ವಿಭಾಗವನ್ನು ನವೀಕರಣಗೊಳಿಸುವ ಕಾಮಗಾರಿ ರೂ.11.97ಲಕ್ಷದಲ್ಲಿ ಕೈಗೊಂಡಿದ್ದು ಕಾಮಗಾರಿ ಮುಗಿಯುವ ಹಂತದಲ್ಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ರಾಜೇಶ್ವರಿದೇವಿ ಸಭೆಗೆ ತಿಳಿಸಿದರು.
ವೆನ್‌ಲಾಕ್ ಆಸ್ಪತ್ರೆಯಲ್ಲಿ ಸರ್ಕಾರ ಮಂಜೂರು ಮಾಡಿರುವ 630 ಸಿಬ್ಬಂದಿಯಲ್ಲಿ ಹಾಲಿ 277 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ, 353ಜನ ಸಿಬ್ಬಂದಿಗಳ ಅವಶ್ಯಕತೆ ಇದೆ, ತುರ್ತಾಗಿ 64 ಜನ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್‌ಗಳು, ತಾಂತ್ರಿಕ ಸಿಬ್ಬಂದಿಗಳ ಅವಶ್ಯಕತೆ ಇದೆ ಎಂದು ರಾಜೇಶ್ವರಿ ದೇವಿ ತಿಳಿಸಿದ್ದು, ಜಿಲ್ಲಾಧಿಕಾರಿಗಳು ಅತಿ ಜರೂರಾಗಿ ಬೇಕಾದ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆಯಲು ಅನುಮತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣರಾವ್ ಮುಂತಾದವರು ಭಾಗವಹಿಸಿದ್ದರು