ಸಹಜ ಸ್ಥಿತಿಯತ್ತ ತೆವಳುತ್ತಿರುವ ಹರ್ಯಾಣ
ಹೊಸದಿಲ್ಲಿ,ಫೆ.22: ಜಾಟ್ ಸಮುದಾಯದ ಮೀಸಲಾತಿ ಬೇಡಿಕೆಯನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸುವುದಾಗಿ ಬಿಜೆಪಿ ಪ್ರಕಟಿಸಿದ ಬಳಿಕ ವಿವಿಧ ಜಿಲ್ಲೆಗಳಲ್ಲಿ ಹೇರಲಾಗಿರುವ ಕರ್ಫ್ಯೂವನ್ನು ಕ್ರಮೇಣ ಹಿಂದೆಗೆದುಕೊಳ್ಳಲಾಗುತ್ತಿದ್ದು, ಜಾಟ್ ಪ್ರತಿಭಟನಾಕಾರರು ತಾವು ನಿರ್ಮಿಸಿದ್ದ ರಸ್ತೆ ತಡೆಗಳನ್ನು ತೆಗೆದು ಹಾಕುವುದರೊಂದಿಗೆ ದಂಗೆ ಪೀಡಿತ ಹರ್ಯಾಣ ಸೋಮವಾರ ನಿಧಾನವಾಗಿ ಸಹಜ ಸ್ಥಿತಿಗೆ ಮರಳತೊಡಗಿದೆ.
ರವಿವಾರ ಸಂಜೆ ಕೈಥಾಲ್ ಮತ್ತು ಕಲಾಯತ್‌ಗಳಲ್ಲಿ ಕರ್ಫ್ಯೂವನ್ನು ಹಿಂದೆಗೆದುಕೊಳ್ಳಲಾಗಿದ್ದು, ಸೋಮವಾರ ಬೆಳಿಗ್ಗೆ ಹಿಸ್ಸಾರ್ ಮತ್ತು ಹಂಸಿ ಕರ್ಫ್ಯೂ ಮುಕ್ತಗೊಂಡವು. ಜಾಟ್ ಪ್ರತಿಭಟನೆಯಿಂದ ತೀವ್ರ ಬಾಧಿತಗೊಂಡಿದ್ದ ರೋಹ್ತಕ್‌ನಲ್ಲಿ ಒಂದು ಗಂಟೆಯ ಅವಧಿಗೆ ಕರ್ಫ್ಯೂವನ್ನು ಸಡಿಲಿಸಲಾಗಿತ್ತು. ತನ್ಮಧ್ಯೆ ಹರ್ಯಾಣದ ಮುನಾಕ್ ನಾಲೆಯನ್ನು ಸೋಮವಾರ ಸಂಜೆ ಸೇನೆಯು ತನ್ನ ವಶಕ್ಕೆ ತೆಗೆದುಕೊಂಡಿದ್ದು ತನ್ಮೂಲಕ ನೀರು ಪೂರೈಕೆ ಸ್ಥಗಿತಗೊಂಡು ಪರದಾಡುತ್ತಿದ್ದ ರಾಷ್ಟ್ರ ರಾಜಧಾನಿಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಜಾಟ್ ಮೀಸಲಾತಿಯನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸುವುದಾಗಿ ಕೇಂದ್ರವು ಪ್ರಕಟಿಸಿದ್ದು,ಹರ್ಯಾಣ ಸರಕಾರವು ಸಮುದಾಯಕ್ಕೆ ಒಬಿಸಿ ಸ್ಥಾನಮಾನ ನೀಡಲು ಮಸೂದೆಯೊಂದನ್ನು ತರಲಿದೆ.
ತನ್ಮಧ್ಯೆ ಸೇನೆಯು ರೋಹ್ತಕ್ ಮತ್ತು ಭಿವಾನಿಗಳಲ್ಲಿ ಧ್ವಜ ಸಂಚಲನ ನಡೆಸಿದೆ.
ಮುಖ್ಯಮಂತ್ರಿ ಮನೋಹಲಾಲ ಖಟ್ಟರ್ ಅವರು ಸೋಮವಾರ ಸಂಜೆ ಚಂಡಿಗಡದಲ್ಲಿ ಸಂಪುಟ ಸಭೆಯನ್ನು ನಡೆಸಿ ಪರಿಸ್ಥಿತಿಯನ್ನು ಪುನರ್‌ಪರಿಶೀಲಿಸಿದರು.
ರೋಹ್ತಕ್ ಜಿಲ್ಲೆಯ ಮೇಹಮ್‌ನಲ್ಲಿ ಸರಕಾರಿ ವಾಹನಕ್ಕೆ ಅಗ್ನಿಸ್ಪರ್ಶ ಸೇರಿದಂತೆ ಅಲ್ಲಲ್ಲಿ ಕೆಲವು ಹಿಂಸಾಚಾರದ ಘಟನೆಗಳು ನಡೆದಿರುವುದು ವರದಿಯಾಗಿದೆ.
ವಿವಿಧ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸೋಮವಾರವೂ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಹಲವಾರು ರೈಲುಗಳೂ ರದ್ದಾಗಿದ್ದವು.