×
Ad

ಚುಟುಕು ಸುದ್ದಿಗಳು

Update: 2016-02-22 23:45 IST

ಇಂದು ಹಕ್ಕುಪತ್ರ ಮೇಳ
ಕಾಸರಗೋಡು, ಫೆ.22: ಜಿಲ್ಲಾ ಮಟ್ಟದ ಹಕ್ಕು ಪತ್ರ ಮೇಳ ಫೆ.23ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ.ಎಸ್. ಮುಹಮ್ಮದ್ ಸಗೀರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 6 ಸಾವಿರ ಮಂದಿಗೆ ಅಂದು ಬೆಳಗ್ಗೆ ರಾಜ್ಯ ಕಂದಾಯ ಸಚಿವ ಅಡೂರು ಪ್ರಕಾಶ್ ಹಕ್ಕುಪತ್ರವನ್ನು ವಿತರಿಸುವರು. 2014ರ ಫೆ.1ರಿಂದ ಮಾ.31ರ ತನಕ ಸ್ವೀಕರಿಸಿದ ಅರ್ಜಿಗಳು, ಕಂದಾಯ ಸರ್ವೇ ಅದಾಲತ್, ಜನಸಂಪರ್ಕ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಪರಿಗಣಿಸಿ ಹಕ್ಕು ಪತ್ರ ವಿತರಿಸಲಾಗುವುದು. ತಲಾ ಮೂರು ಸೆಂಟ್ಸ್ ಸ್ಥಳದ ಹಕ್ಕು ಪತ್ರ ನೀಡಲಾಗುವುದು.ಹೆಚ್ಚುವರಿ ದಂಡಾಧಿಕಾರಿ ಎಚ್. ದಿನೇಶನ್, ಉಪ ತಹಶೀಲ್ದಾರ್ ಸಿ. ಜಯನ್, ಬಿ. ಅಬ್ದುಲ್ ನಾಸರ್, ಆರ್.ಪಿ. ಮಹಾದೇವ ಕುಮಾರ್, ಕೆ., ಜಯಲಕ್ಷ್ಮೀ, ಕೆ. ಕುಂಞಂಬು ನಾಯರ್, ಪಿ.ಎಸ್. ಅನಿಲ್, ವೀಣಾ ಮ್ಯಾಥ್ಯೂ, ಎಂ. ಪ್ರದೀಪ್, ಶಶಿಧರ ಶೆಟ್ಟಿ , ವಿ. ಜಯರಾಜನ್, ಪಿ.ಕೆ. ಶೋಭಾ, ಕೆ. ಸುಜಾತಾ ಉಪಸ್ಥಿತರಿದ್ದರು.

ನಾಳೆಯಿಂದ ಕಲಂಕಾರಿ ಚಿತ್ರಕಲಾ ಪ್ರದರ್ಶನ
ಮಂಗಳೂರು, ಫೆ.22: ಮಹಾಲಸಾ ಚಿತ್ರಕಲಾ ಶಾಲೆಯ ಪ್ರಸಕ್ತ ಸಾಲಿನ ಕಾರ್ಯಾಗಾರದಲ್ಲಿ ರಚನೆಗೊಂಡ ಕಲಂಕಾರಿ ಸಾಂಪ್ರದಾಯಿಕ ಚಿತ್ರಕಲಾ ಪ್ರದರ್ಶನ ನಗರದ ಬಲ್ಲಾಳ್‌ಬಾಗ್‌ನಲ್ಲಿರುವ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಫೆ. 24ರಿಂದ 26ರವರೆಗೆ ನಡೆಯಲಿದೆ. ಫೆ. 24ರಂದು ಬೆಳಗ್ಗೆ 11 ಗಂಟೆಗೆ ಕಲಾವಿದ ಗಣೇಶ್ ಸೋಮಯಾಜಿ ಪ್ರದರ್ಶನವನ್ನು ಉದ್ಘಾಟಿಸುವರು. ಬಿವಿಎ ಅಂತಿಮ ವರ್ಷದ ಪೇಯ್ಟಿಂಗ್ ಮತ್ತು ಅನ್ವಯಿಕ ಕಲೆ ವಿಭಾಗದ ಆಯ್ದ 13 ವಿದ್ಯಾರ್ಥಿಗಳ 30 ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ ಎಂದು ಪ್ರಕಟನೆ ತಿಳಿಸಿದೆ.

ನಾಳೆ ಕಾರ್ಮಿಕರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ
ಮಂಗಳೂರು, ಫೆ.22 : ಕೇಂದ್ರ ಸರಕಾರ ಈ ಹಿಂದೆ ಕಾರ್ಮಿಕರಿಗೆ ನೀಡಿದ ಲಿಖಿತ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ೆ.24ರಂದು ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ. ವಿಶ್ವನಾಥ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಕೇಂದ್ರಕ್ಕೆ ಸಲ್ಲಿಸಿದ ಕಾರ್ಮಿಕರ 12 ಬೇಡಿಕೆಗಳ ಬಗ್ಗೆ ಸರಕಾರ ನಿರ್ಲಕ್ಷಿಸಿತ್ತು. ಆ ಹಿನ್ನೆಲೆಯಲ್ಲಿ ಕಳೆದ ವರ್ಷ ದೇಶವ್ಯಾಪಿ ಮುಷ್ಕರ ನಡೆಸಿತ್ತು. ಅದರಂತೆ ಕೇಂದ್ರ ಕಾರ್ಮಿಕ ಸಚಿವರು ಬೇಡಿಕೆ ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿದ್ದರು. ಆದರೆ ಅದನ್ನು ಈಡೇರಿಸಲಿಲ್ಲ. ಹಾಗಾಗಿ ಬೇಡಿಕೆಗಳ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಉಲ್ಲೇಖಿಸುವಂತೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ವಿ. ಲೋಕೇಶ್, ಉಪಾಧ್ಯಕ್ಷ ಪುರುಷೋತ್ತಮ, ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ ಹಾಗೂ ಸಿಂಡಿಕೇಟ್ ಬ್ಯಾಂಕ್ ಸ್ಟ್ಾ ಅಸೋಸಿಯೇಶನ್ ಉಪಾಧ್ಯಕ್ಷ ಪ್ರಭಾಕರ ಯು. ಉಪಸ್ಥಿತರಿದ್ದರು.

25ರಂದು ರಾಜ್ಯ ಮಟ್ಟದ ವಿಚಾರ ಸಂಕಿರಣ
ಮಂಗಳೂರು, ಫೆ. 22: ಜೆಪ್ಪುವಿನ ಸಂತ ಜೋಸೆಫ್ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಅಂತರ್ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕನ್ನಡ ವಿಚಾರ ಸಂಕಿರಣವನ್ನು ಫೆ.25ರಂದು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ‘ಸಾಹಿತ್ಯ ಮತ್ತು ಬದುಕು’ ಎಂಬ ಕಾರ್ಯಕ್ರಮವನ್ನು ಸಾಹಿತಿ ಹಾಗೂ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.

ಪಟ್ಟೋರಿ: ಪದಾಧಿಕಾರಿಗಳ ಆಯ್ಕೆ
 ಕೊಣಾಜೆ, ಫೆ.22: ಪಟ್ಟೋರಿ ಶ್ರೀ ನಾಗಬ್ರಹ್ಮ ಭಜನಾ ಮಂಡಳಿಯ ವಾರ್ಷಿಕ ಮಹಾಸಭೆಯು ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು. 2016-17ನೆ ಸಾಲಿನ ಅಧ್ಯಕ್ಷರಾಗಿ ಗಂಗಾಧರ ಎಂ. ಪಟ್ಟೋರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮೋಹನ ಕಾಟುಕೋಡಿ, ಗೌರವಾಧ್ಯಕ್ಷರಾಗಿ ಸತ್ಯನಾರಾಯಣ ಭಟ್ ಕೊಣಾಜೆ, ರಘುರಾಮ ಕಾಜವ ಪಟ್ಟೋರಿ, ಗೌರವ ಸಲಹೆಗಾರರಾಗಿ ಬಂಟು ಕೆ., ಕರುಣಾಕರ ಕಾನ, ಶ್ರೀನಿವಾಸ ಕಾಜವ, ದಿವಾಕರ ಭಂಡಾರಿ, ರಾಮಕೃಷ್ಣ ಪಟ್ಟೋರಿ, ಉಪಾಧ್ಯಕ್ಷರಾಗಿ ಸದಾಶಿವ ಪಟ್ಟೋರಿ, ಹರೀಶ್ ನಡುಪದವು, ಜೊತೆ ಕಾರ್ಯದರ್ಶಿಗಳಾಗಿ ರಾಕೇಶ್ ಪಟ್ಟೋರಿ, ಯತೀನ್ ಮದಕ, ಕೋಶಾಧಿಕಾರಿಯಾಗಿ ರಾಧಾಕೃಷ್ಣ ಕಲಾಯಿ, ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ಪಟ್ಟೋರಿ, ನವೀನ್ ಪಟ್ಟೋರಿ, ಲೆಕ್ಕ ಪರಿಶೋಧಕರಾಗಿ ಬಂಟು ಕೆ.ಕಾಟುಕೋಡಿ, ಮಾಧ್ಯಮ ಸಲಹೆಗಾರರಾಗಿ ಸತೀಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮೋಹನ್ ಶಿರ್ಲಾಲ್ ಆಯ್ಕೆಯಾದರು.

ಅವಧಿ ವಿಸ್ತರಣೆ
ಕಾಸರಗೋಡು, ಫೆ.22: ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸುವುದಕ್ಕಾಗಿ ನಡೆಸಲಾಗುವ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸುವ ದಿನಾಂಕವನ್ನು ಫೆ.29ರ ತನಕ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎಸ್. ಮುಹಮ್ಮದ್ ಸಗೀರ್ ತಿಳಿಸಿದ್ದಾರೆ.ಅರ್ಜಿದಾರರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದಿನಾಂಕವನ್ನು ವಿಸ್ತರಿಸಿದ್ದು , ಅರ್ಜಿಗಳನ್ನು ಸಮೀಪದ ಪ್ರಾಥಮಿಕ , ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಲ್ಲಿಸುವಂತೆ ಪ್ರಕಟನೆ ತಿಳಿಸಿದೆ.

ಮಾ.7: ಕದಳಿ ಮಠದ ಪರ್ಯಾಯ ರಾಜಪಟ್ಟಾಭಿಷೇಕ
ಮಂಗಳೂರು, ೆ. 22: ಕದಳಿ ಯೋಗೇಶ್ವರ (ಜೋಗಿ) ಮಠದ ನೂತನ ಪೀಠಾಪತಿ ನಿರ್ಮಲ್‌ನಾಥ್‌ಜಿಯವರ ಪಟ್ಟಾಭಿಷೇಕವು ಮಾ.7 ರಂದು ಬೆಳಗ್ಗೆ 9:25 ಕ್ಕೆ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿಯವರ ಪೌರೋಹಿತ್ಯದಲ್ಲಿ ನೆರವೇರಲಿದೆ ಎಂದು ಪಟ್ಟಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಕದಳಿ ಮಠಕ್ಕೆ ನೂತನ ಪೀಠಾಪತಿಗಳನ್ನು ಪ್ರತಿ 12 ವರ್ಷಗಳಿಗೊಮ್ಮೆ ನೇಮಿಸಲಾಗುತ್ತದೆ ಎಂದರು. ವಿಜಯನಗರ ಸಾಮ್ರಾಜ್ಯದ ವಿವಿಧ ಅರಸರು ಶ್ರೀ ಕ್ಷೇತ್ರದ ಪೀಠಾಪತಿಗಳಿಗೆ 150 ಎಕರೆಗಳಷ್ಟು ಜಮೀನು ದಾನ ನೀಡಿ ಈ ಪ್ರದೇಶದ ಆಳ್ವಿಕೆಯನ್ನು ನಡೆಸುವಂತೆ ಕೋರಿದ ಹಿನ್ನ್ನೆಲೆಯಲ್ಲಿ ಪೀಠಾಪತಿಗಳನ್ನು ರಾಜ ಎಂದು ಸಂಬೋಸಲಾಗುತ್ತದೆ. ರಾಜರ ಆಯ್ಕೆ ವಾಡಿಕೆಯಂತೆ ತ್ರೆಂಬಕೇಶ್ವರ (ನಾಸಿಕ) ದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಶ್ರಾವಣ ಮಾಸದಲ್ಲಿ ಜರಗುವ ಕುಂಭ ಮೇಳದಲ್ಲಿ ನಡೆಯುತ್ತದೆ. 2015ರಲ್ಲಿ ನಡೆದ ಕುಂಭಮೇಳದಲ್ಲಿ ಯೋಗಿ ನಿರ್ಮಲ್‌ನಾಥ್ ಕದಳಿ ಪೀಠದ ನೂತನ ರಾಜರಾಗಿ ಆಯ್ಕೆಯಾಗಿದ್ದಾರೆ. ಅವರನ್ನೊಳಗೊಂಡ ನವನಾಥ ಝುಂಡಿಯು ೆ.26ರಂದು ಬೆಳಗ್ಗೆ ಗಂಟೆ 7ಕ್ಕೆ ಕೊಟ್ಟಾರ ಚೌಕಿಯಲ್ಲಿ ಮಂಗಳೂರು ಪುರ ಪ್ರವೇಶಗೈಯಲಿದೆ. ಈ ಝುಂಡಿಯಲ್ಲಿ ಇಬ್ಬರು ವೈದ್ಯ, ಮೂವರು ಇಂಜಿನಿಯರ್ ಮತ್ತು 19 ಸ್ನಾತಕೋತ್ತರ ಪದವೀಧರ ಸನ್ಯಾಸಿಗಳಿದ್ದಾರೆ. ಅಲ್ಲದೆ ಹಠಯೋಗಿಗಳಿದ್ದಾರೆ. ಯೋಗಿ ರಾಜೇಂದ್ರನಾಥ್ ಕಳೆದ 15 ವರ್ಷಗಳಿಂದ ನಿಂತುಕೊಂಡೇ ಹಠಯೋಗ ನಿರತರಾಗಿದ್ದಾರೆ. ೆ.26ರಿಂದ ಮಾ.7ರವರೆಗೆ ಸಂಜೆ ಕದಳಿ ಮಠದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವ ಸಮಿತಿ ಸಂಚಾಲಕ ಡಾ. ಪಿ. ಕೇಶವನಾಥ್, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಸಲಹೆಗಾರರಾದ ಯಂ. ರಾಮಚಂದ್ರ, ಎಂ. ಸುರೇಶ್ ಜೋಗಿ, ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಜೋಗಿ, ಸಂಘದ ಕಾರ್ಯದರ್ಶಿ, ಬಿ. ಗಂಗಾಧರ್, ಕೋಶಾಕಾರಿ ಕೆ. ಸುರೇಶ್. ಮಹೋತ್ಸವ ಹಣಕಾಸು ಸಮಿತಿ ಅಧ್ಯಕ್ಷ ಕೆ.ಪದ್ಮನಾಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News