ಫಿಜಿ ಚಂಡಮಾರುತ: ಮೃತರ ಸಂಖ್ಯೆ 20ಕ್ಕೆ
Update: 2016-02-22 23:52 IST
ಸುವ (ಫಿಜಿ), ಫೆ. 22: ಫಿಜಿಗೆ ಅಪ್ಪಳಿಸಿದ ಚಂಡಮಾರುತದಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೇರಿದೆ. ದೂರದ ಪ್ರದೇಶಗಳಿಂದ ಸಾವು-ನೋವಿನ ವರದಿಗಳು ನಿಧಾನವಾಗಿ ಬರಲಾರಂಭಿಸಿದ್ದು, ಸತ್ತವರ ಸಂಖ್ಯೆ ಇನ್ನಷ್ಟು ಏರಬಹುದು ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಚಂಡಮಾರುತದ ಹಿನ್ನೆಲೆಯಲ್ಲಿ ಫಿಜಿಯಲ್ಲಿ ಸಿಕ್ಕಿಹಾಕಿಕೊಂಡಿರುವ ವಿದೇಶಿ ಪ್ರವಾಸಿಗರು ಸೋಮವಾರ ದೇಶದಿಂದ ಹೊರಹೋಗಲು ಆರಂಭಿಸಿದ್ದಾರೆ.
ಶನಿವಾರ ರಾತ್ರಿ ಅಪ್ಪಳಿಸಿದ ‘ವಿನ್‌ಸ್ಟನ್’ ಚಂಡಮಾರುತ ಊರಿಗೆ ಊರನ್ನೇ ನೆಲಸಮಗೊಳಿಸಿದೆ. ಗಂಟೆಗೆ 325 ಕಿಲೋ ಮೀಟರ್ ವೇಗದ ಗಾಳಿ ಪೆಸಿಫಿಕ್‌ನ ದ್ವೀಪ ರಾಷ್ಟ್ರಕ್ಕೆ ಅಪ್ಪಳಿಸಿತು.
ವಿನ್‌ಸ್ಟನ್ ಚಂಡಮಾರುತ ದಕ್ಷಿಣ ಭೂಗೋಳದಲ್ಲಿ ದಾಖಲಾದ ಚಂಡಮಾರುತಗಳಲ್ಲೇ ಅತ್ಯಂತ ತೀವ್ರಸ್ವರೂಪದ್ದಾಗಿತ್ತು. ನೂರಾರು ಮನೆಗಳು ನೆಲಸಮವಾಗಿವೆ ಹಾಗೂ ಮೂಲಸೌಕರ್ಯಗಳು ಧ್ವಂಸಗೊಂಡಿವೆ. ಸಾವಿರಾರು ಭಯಗ್ರಸ್ತ ನಿವಾಸಿಗಳು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದರು.