ಪ್ರಥಮ ಪ್ರಯತ್ನದಲ್ಲೇ ನಾಲ್ಕು ಸಾವಿರಕ್ಕೂ ಹೆಚ್ಚು ಮತ ಗಳಿಸಿದ ಎಸ್ ಡಿ ಪಿ ಐ
ಮಂಗಳೂರು , ಫೆ. 23 : ತೀವ್ರ ಹಣಾಹಣಿಗೆ ಸಾಕ್ಷಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುದು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಕೊನೆಗೂ ಬಿಜೆಪಿ ಗೆಲುವಿನ ನಗೆ ಬೀರಿದೆ. ಆರೋಗ್ರ ಸಚಿವ ಯು. ಟಿ. ಖಾದರ್ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಈ ಕ್ಷೇತ್ರದಲ್ಲಿ ಬಿಜೆಪಿಯ ರವೀಂದ್ರ ಕಂಬಳಿ ಅವರು 7062 ಮತಗಳನ್ನು ಪಡೆದು , ಕಾಂಗ್ರೆಸ್ ನ ಉಮರ್ ಫಾರೂಕ್ ಅವರನ್ನು ಸೋಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಸ್ಪರ್ಧಿ ರಿಯಾಝ್ ಅವರು 4168 ಮತಗಳನ್ನು ಗಳಿಸಿರುವುದು ಕಾಂಗ್ರೆಸ್ ಪಾಲಿಗೆ ಮುಳುವಾಗಿದೆ. ಕಾಂಗ್ರೆಸ್ ಪಡೆದ ಮತಗಳ ಸಂಖ್ಯೆ 6927.
ಕಾಂಗ್ರೆಸ್ ಭದ್ರಕೋಟೆ ಎಂದೇ ಪರಿಗಣಿಸಲಾದ ಈ ಕ್ಷೇತ್ರದಲ್ಲಿ ಈ ಬಾರಿ ಎಸ್ ಡಿ ಪಿ ಐ ಸ್ಪರ್ಧೆಯಿಂದ ಕಾಂಗ್ರೆಸ್ ಗೆ ಸವಾಲು ಎದುರಾಗಿತ್ತು. ಆದರೂ ಸಚಿವೆ ಖಾದರ್ ನೇತೃತ್ವದಲ್ಲಿ ಬಿರುಸಿನ ಪ್ರಚಾರ ಕೈಗೊಂಡ ಕಾಂಗ್ರೆಸ್ ಸಣ್ಣ ಅಂತರದಲ್ಲಾದರೂ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಎಸ್ ಡಿ ಪಿ ಐ ಅಭ್ಯರ್ಥಿ ನಿರೀಕ್ಷೆಗೂ ಮೀರಿದ ಮತ ಗಳಿಸಿದ್ದು ಕಾಂಗ್ರೆಸ್ ಗೆ ಸ್ಪಷ್ಟ ಹಿನ್ನಡೆ ಉಂಟು ಮಾಡಿದ್ದು ಅದರ ಲಾಭವನ್ನು ಬಿಜೆಪಿ ಪಡೆದುಕೊಂಡಿದೆ.
ಪುದು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಕ್ಷೇತ್ರವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಕ್ಷೇತ್ರವಾದ ಬಂಟ್ವಾಳ ತಾಲೂಕಿನಲ್ಲಿರುವ ಈ ಕ್ಷೇತ್ರ ಆರೋಗ್ಯ ಸಚಿವ ಯು. ಟಿ . ಖಾದರ್ ಅವರ ಮಂಗಳೂರು ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ಮುಸ್ಲಿಮರ ಮತಗಳು ದೊಡ್ಡ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗು ಎಸ್. ಡಿ. ಪಿ. ಐ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಆದರೂ ಎಸ್. ಡಿ. ಪಿ. ಐ ಹೆಚ್ಚು ಮತ ಗಳಿಸದು ಎಂದು ಕಾಂಗ್ರೆಸ್ ಅಂದಾಜು ಮಾಡಿತ್ತು. ಆದರೆ ಅದರ ಲೆಕ್ಕಾಚಾರ ಮೇಲೆ ಕೆಳಗಾಗಿದೆ. ಮೊದಲ ಪ್ರಯತ್ನದಲ್ಲೇ ವ್ಯವಸ್ಥಿತ ಪ್ರಚಾರದ ಮೂಲಕ ಎಸ್. ಡಿ. ಪಿ. ಐ ನಾಲ್ಕು ಸಾವಿರಕ್ಕೂ ಹೆಚ್ಚು ಮತ ಗಳಿಸಿದೆ. ಇದು ಕಾಂಗ್ರೆಸ್ ಕೈ ಯಿಂದ ಕ್ಷೇತ್ರ ಜಾರಿ ಹೋಗಲು ಕಾರಣವಾಗಿದೆ. ಬಿಜೆಪಿಗೆ ಒಂದು ಸುಲಭ ಜಯ ಸಿಕ್ಕಿದೆ.