×
Ad

ಪಕ್ಷದ ಸರಕಾರ, ನಾಲ್ಕು ಸಚಿವರು, ಡಝನ್ ಶಾಸಕರಿದ್ದರೂ ದ.ಕ. , ಉಡುಪಿಯ ಗದ್ದುಗೆ ಕಳೆದುಕೊಂಡ ಕಾಂಗ್ರೆಸ್

Update: 2016-02-23 14:13 IST

ಮಂಗಳೂರು , ಫೆ 23: ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಗಳನ್ನೂ ಬಿಜೆಪಿ ಉಳಿಸಿಕೊಂಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ, ಅವಿಭಜಿತ ದ.ಕ.ಜಿಲ್ಲೆಯಲ್ಲಿ ಒಟ್ಟು ನಾಲ್ಕು ಸಚಿವರಿದ್ದಾರೆ. ಅವರನ್ನೂ ಸೇರಿಸಿ ಡಝನ್ ಶಾಸಕರಿದ್ದಾರೆ. ಆದರೆ ಇವ್ಯಾವುವೂ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿಲ್ಲ.

ಈ ಎರಡೂ ಜಿಲ್ಲೆಗಳ ಆಡಳಿತದ ಕೇಂದ್ರ ಜಿಲ್ಲಾ ಪಂಚಾಯತ್  ಬಿಜೆಪಿಯ ಕೈ ಯಲ್ಲಿ ಭದ್ರವಾಗಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ 21 ಹಾಗು ಕಾಂಗ್ರೆಸ್ 15 ಜಿಲ್ಲಾ ಪಂಚಾಯತ್ ಕ್ಷೇತ್ರ ಗಳನ್ನು ಗೆದ್ದಿವೆ . ಉಡುಪಿಯಲ್ಲಿ ಬಿಜೆಪಿ 20 ಹಾಗೂ ಕಾಂಗ್ರೆಸ್ ಕೇವಲ 6 ಕ್ಷೇತ್ರಗಳನ್ನು ಪಡೆದಿವೆ. 
ಇದು ಉಭಯ ಜಿಲ್ಲೆಗಳ ಕಾಂಗ್ರೆಸ್ ಪಾಲಿಗೆ ಸ್ಪಷ್ಟ ಹಾಗು ದೊಡ್ಡ ಹಿನ್ನಡೆ. ಬಿಜೆಪಿಯ ಪಾಲಿಗೆ ಬಹುದೊಡ್ಡ ಮುನ್ನಡೆ. ಅದರ ಆತ್ಮ ವಿಶ್ವಾಸವನ್ನು ದುಪ್ಪಟ್ಟು ಮಾಡುವ ವಿಜಯವಿದು .

 
ಇಲ್ಲಿನ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಇದು ಆತ್ಮ ವಿಮರ್ಶೆಗೆ ಸಕಾಲವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಭಯ ಜಿಲ್ಲೆಗಳ ಜನರು ಬಿಜೆಪಿಯನ್ನು ಮೂಲೆಗೊತ್ತಿ ಕಾಂಗ್ರೆಸ್  ಅನ್ನು ಬೆಂಬಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳು ಬಹು ದೊಡ್ಡ ಬಹುಮತಗಳೊಂದಿಗೆ ಜಯಭೇರಿ ಬಾರಿಸಿದ್ದರು. ಆದರೆ ಈಗ ಪರಿಸ್ಥಿತಿ ಅಂದಿನಂತಿಲ್ಲ. ಇಡೀ ಆಡಳಿತ ಯಂತ್ರ ತನ್ನ ಕೈ ಯಲ್ಲಿದ್ದೂ ಕಾಂಗ್ರೆಸ್ ಗೆ ಯಾಕೆ ಇಷ್ಟು ದೊಡ್ಡ ಹಿನ್ನಡೆಯಾಯಿತು ಎಂಬುದನ್ನು ಆ ಪಕ್ಷದ ಮುಖಂಡರು, ಸಚಿವರುಗಳು ಪ್ರಾಮಾಣಿಕವಾಗಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಮುಂದಿನ ಚುನಾವಣೆಗೆ ವರ್ಷ ಇನ್ನೆರಡು ಇದ್ದರೂ ಪಂಚಾಯತ್ ಚುನಾವಣೆ ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ರಾಜಕೀಯ ವಲಯಗಳಲ್ಲಿ ಪರಿಗಣಿಸಲಾಗುತ್ತದೆ. ಆ ಲೆಕ್ಕದಲ್ಲಿ ಕಾಂಗ್ರೆಸ್ ಪಾಲಿಗೆ ಈ ಚುನಾವಣೆಯ  ಫಲಿತಾಂಶವು ಬರಲಿರುವ ಚುನಾವಣೆಗಳಲ್ಲಿ ಕಾಡಬಹುದಾದ ಅತೀ ದೊಡ್ಡ ಅಪಾಯದ ಸ್ಪಷ್ಟ ಮುನ್ಸೂಚನೆ ಇದಾಗಿದೆ. ಅಧಿಕಾರದ ಅಮಲಿನಲ್ಲಿ ತೂಕಡಿಸುತ್ತಿರುವ ಇಲ್ಲಿನ ಕಾಂಗ್ರೆಸ್  ಮುಖಂಡರು ಈಗಲಾದರೂ ಎಚ್ಚೆತ್ತು ಇದನ್ನು ತಿಳಿದುಕೊಂಡರೆ ಅವರಿಗೆ ಹಾಗು ಅವರ ಪಕ್ಷಕ್ಕೆ ಪ್ರಯೋಜನವಿದೆ. ಇಲ್ಲದಿದ್ದರೆ ಮತ್ತೆ ಮನೆಯಲ್ಲಿ ಕುಳಿತುಕೊಳ್ಳಲು ಸಿದ್ದರಾಗಿರಬೇಕು ಅಷ್ಟೇ.

 
ಸರಕಾರ ಬಂದು ಮೂರು ವರ್ಷವಾದರೂ  ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್ ಆಡಳಿತ ಕಂಡು ಬರಲೇ ಇಲ್ಲ ಎಂಬುದು ಇಲ್ಲಿನ ಜನರಿಗಿರುವ ಅತಿ ದೊಡ್ಡ ದೂರು. ಆಡಳಿತದಲ್ಲಿ ಚುರುಕು, ಪೊಲೀಸ್ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ, ಕೋಮುವಾದ ನಿಗ್ರಹಿಸಲು ಆಡಳಿತಾತ್ಮಕ ಹಾಗು ಸಾಮಾಜಿಕ ಕ್ರಮಗಳು - ಇತ್ಯಾದಿಗಳನ್ನು ನಿರೀಕ್ಷಿಸಿದ್ದ ಇಲ್ಲಿನ ಜನರನ್ನು ಈ ಜಿಲ್ಲೆಗಳ ಕಾಂಗ್ರೆಸ್ ಜನಪ್ರತಿನಿಧಿಗಳು ಅದರಲ್ಲೂ ಸಚಿವರು ಸಂಪೂರ್ಣ ನಿರಾಶೆಗೊಳಿಸಿದ್ದರು.

 ರಾಜ್ಯ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ.  ಅದೇ ಕೇಂದ್ರ ಸರಕಾರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಆದರೆ ಅವುಗಳನ್ನು ಜನರ ಬಳಿ ತೆಗೆದುಕೊಂಡು ಹೋಗಿ ಪಕ್ಷವನ್ನು ಬೆಳೆಸುವಲ್ಲಿ ಈ ಸಚಿವರು ವಿಫಲರಾಗಿದ್ದಾರೆ . ಇದು ಅವರ ದೊಡ್ಡ ವೈಫಲ್ಯ.

 
ಅಧಿಕಾರ ಸಿಕ್ಕಿದ ಕೂಡಲೇ ಮೈ ಮರೆತು ಪಕ್ಷ ಬೆಳೆಸದೆ ಇದ್ದುದಕ್ಕೆ ಯಾವ ಬೆಲೆ ತೆರಬೇಕು ಎಂಬುದಕ್ಕೆ ಉಭಯ ಜಿಲ್ಲೆಗಳ ಕಾಂಗ್ರೆಸ್ ಸಚಿವರು ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಜಿಲ್ಲೆಯಲ್ಲಿ ತಮ್ಮ ಪಕ್ಷದ ಸಿದ್ಧಾಂತವನ್ನು ಹರಡಲು , ಮತಾಂಧರ ಜೊತೆ ತಿರುಗುತ್ತಿರುವ ಯುವಕರನ್ನು ತಮ್ಮತ್ತ ಸೆಳೆಯಲು, ಜನರಲ್ಲಿ ಜಾತ್ಯತೀತತೆ ಕುರಿತು ಜಾಗೃತಿ ಮೂಡಿಸಲು, ಜಿಲ್ಲೆಯಲ್ಲಿ ಕೋಮುವಾದವನ್ನು ನಿಗ್ರಹಿಸಲು , ಅಂತಹ ಶಕ್ತಿಗಳಿಗೆ ಕಡಿವಾಣ ಹಾಕಲು  ಈ ಸಚಿವರು ತಮ್ಮ ಅಧಿಕಾರವಧಿಯಲ್ಲಿ ಏನು ಮಾಡಿದ್ದಾರೆ ?

 
ಈ ನಿಷ್ಕ್ರಿಯತೆಗೆ ಈಗ ಕಾಂಗ್ರೆಸ್ ಇಲ್ಲಿ ಬೆಲೆ ತೆತ್ತಿದೆ. ತಕ್ಷಣ ಎಚ್ಚೆತ್ತುಕೊಂಡು ಸರಿ ಹೆಜ್ಜೆ ಇಟ್ಟರೆ, ತಪ್ಪುಗಳನ್ನು ಸರಿಪಡಿಸಿಕೊಂಡರೆ ಈಗಲೂ ಸುಧಾರಿಸಿಕೊಳ್ಳಬಹುದು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಇಲ್ಲಿ ಪಕ್ಷಕ್ಕೆ ಉಳಿಗಾಲವಿಲ್ಲ . ಹಿಂಬಾಲಕರನ್ನು ಇಟ್ಟುಕೊಂಡು ತಿರುಗಾಡಿದರೆ ಪಕ್ಷ ಬೆಳೆಯುವುದಿಲ್ಲ ಎಂಬುದನ್ನು ತಿಳಿದುಕೊಳ್ಳಲು ತಡ ಮಾಡಿದಷ್ಟೂ ಅವರಿಗೇ ನಷ್ಟ ಹೆಚ್ಚು.

Writer - ವೀಕ್ಷಕ

contributor

Editor - ವೀಕ್ಷಕ

contributor

Similar News