ಸುಳ್ಯ ತಾಲೂಕಿನಲ್ಲಿ ಮತ್ತೆ ಬಿಜೆಪಿ ಪಾರಮ್ಯ - ಜಿಲ್ಲಾ ಪಂಚಾಯತ್‌ನಲ್ಲಿ ಕ್ಲೀನ್ ಸ್ವೀಪ್
ತಾಲೂಕು ಪಂಚಾಯತ್‌ನಲ್ಲಿ ಹ್ಯಾಟ್ರಿಕ್
ಸುಳ್ಯ: ಶನಿವಾರ ನಡೆದ ತಾಲೂಕು ಪಂಚಾಯತ್. ಜಿಲ್ಲಾ ಪಂಚಾಯತ್ ಚುನಾವಣಾಯ ಮತ ಎಣಿಕೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳವಾರ ನಡೆದಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ತೀರಾ ಹಿನ್ನಡೆ ಅನುಭವಿಸಿದೆ.
ಹ್ಯಾಟ್ತಿಕ್:
ತಾಲೂಕು ಪಂಚಾಯತ್‌ನ 13 ಕ್ಷೇತ್ರಗಳ ಪೈಕಿ 9ರಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದರೆ, ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್ ತೃಪ್ತಿ ಪಟ್ಟುಕೊಂಡಿದೆ. ಬಿಜೆಪಿ ಸತತ ಮೂರನೇಅವಧಿಗೆ ಅಧಿಕಾರ ಹಿಡಿಯುತ್ತಿದೆ. ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ, ಜಾಲ್ಸೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದು, ಉಳಿದಂತೆ ಎಣ್ಮೂರು, ಗುತ್ತಿಗಾರು, ಮಡಪ್ಪಾಡಿ, ಐವರ್ನಾಡು, ಅಜ್ಜಾವರ, ನೆಲ್ಲೂರು ಕೆಮ್ರಾಜೆ, ಅರಂತೋಡು, ಆಲೆಟ್ಟಿ ಮತ್ತು ಬಾಳಿಲ ಕೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜಯಿಯಾಗಿದ್ದಾರೆ. ಜಿ.ಪಂ.ನಲ್ಲಿ ಕ್ಲೀನ್‌ಸ್ವೀಪ್:
ಸುಳ್ಯ ತಾಲೂಕಿನಲ್ಲಿ ನಾಲ್ಕು ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು, ನಾಲ್ಕರಲ್ಲೂ ಬಿಜೆಪಿ ಗೆಲುವು ಸಾಧಿಸಿದ್ದು, ಇಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಬೆಳ್ಳಾರೆ ಕ್ಷೇತ್ರದಲ್ಲಿ ಎಸ್.ಎನ್.ಮನ್ಮಥ, ಗುತ್ತಿಗಾರು ಕ್ಷೇತ್ರದಲ್ಲಿ ಆಶಾ ತಿಮ್ಮಪ್ಪ ಜಾಲ್ಸೂರು ಕ್ಷೇತ್ರದಲ್ಲಿ ಪುಷ್ಪಾವತಿ ಬಾಳಿಲ , ಅರಂತೋಡು ಕ್ಷೇತ್ರದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಗೆದ್ದಿದ್ದಾರೆ. ಜೆಡಿಎಸ್ ದುರ್ಬಲ:
ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಲಾ ಒಂದೊಂದು ಸ್ಥಾನಗಳಿಗೆ ಸ್ಪರ್ಧಿಸಿದ್ದ ಜೆಡಿಎಸ್ ಒಂದು ಸ್ಥಾನವನ್ನೂ ಪಡೆಯಲು ವಿಫಲವಾಗಿದೆ. ಅರಂತೋಡು ಜಿಲ್ಲಾ ಪಂಚಾಯತ್ ಕ್ಷೇತ್ರ, ಸುಬ್ರಹ್ಮಣ್ಯ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಎರಡೂ ಕಡೆ ಜೆಡಿಎಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಬಿಜೆಪಿ ವಿಜಯೋತ್ಸವ:
ಅಭೂತಪೂರ್ವ ಗೆಲುವು ಪಡೆದ ಬಿಜೆಪಿ ಸುಳ್ಯದಲ್ಲಿ ಸಂಭ್ರಮದಿಂದ ವಿಜಯೋತ್ಸವವನ್ನು ಆಚರಿಸಿತು. ಗೆದ್ದ ಅಭ್ಯರ್ಥಿಗಳೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಬಿಜೆಪಿ ಕಚೇರಿ ಎದುರು ಸಮಾವೇಶಗೊಂಡರು. ಮತ ಎಣಿಕೆ ಕೇಂದ್ರದಿಂದ ಹೊರ ಬಂದ ಗೆದ್ದ ಅಭ್ಯರ್ಥಿಗಳಿಗೆ ಪಕ್ಷದ ನಾಯಕರು, ಕಾರ್ಯಕರ್ತರು ಹೂ ಮಾಲೆ ಹಾಕಿ ಅಭಿನಂದಿಸಿದರು. ಕೆವಿಜಿ ಕ್ಯಾಂಪಸ್ ಬಳಿಯಿಂದ ಮೆರವಣಿಗೆ ಆರಂಭಗೊಂಡು ರಥಬೀದಿ ಮೂಲಕ ಗಾಂಧಿನಗರದವರೆಗೆ ಸಾಗಿ ಮುಖ್ಯರಸ್ತೆಯಲ್ಲಿ ಬಸ್‌ನಿಲ್ದಾಣದ ಮೂಲಕ ಶ್ರೀರಾಂಪೇಟೆಯ ಬಿಜೆಪಿ ಕಚೇರಿ ಎದುರು ಸಮಾವೇಶಗೊಂಡರು. ಶಾಸಕ ಅಂಗಾರ ಸೇರಿದಂತೆ ಹಲವು ನಾಯಕರು ಮಾತನಾಡಿದರು.
* ಗುತ್ತಿಗಾರು ಜಿ.ಪಂ.ಕ್ಷೇತ್ರದಿಂದ ಆಯ್ಕೆಯಾದ ಆಶಾ ತಿಮ್ಮಪ್ಪ ಅವರಿಗಿದು ಹ್ತಾಟ್ರಿಕ್ ಗೆಲುವು. ಈ ಮೊದಲು ನೆಲ್ಯಾಡಿ ಹಾಗೂ ಬೆಳ್ಳಾರೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಕಳೆದ ಅವಧಿಯಲ್ಲಿ ಜಿ.ಪಂ.ಅಧ್ಯಕ್ಷರೂ ಆಗಿದ್ದರು.
* ಎರಡು ಬಾರಿ ತಾ.ಪಂ. ಕ್ಷೇತ್ರಗಳಿಂದ ವಿಜಯಿಯಾದ ಪುಷ್ಪಾವತಿ ಬಾಳಿಲ ಈ ಬಾರಿ ಜಿ.ಪಂ.ಪ್ರವೇಶ ಮಾಡಿದ್ದಾರೆ.
* ಸುಳ್ಯ ತಾಲೂಕು ಪಂಚಾಯತ್ ಪ್ರವೇಶಿಸಿದ ಎಲ್ಲರೂ ಕೂಡಾ ಹೊಸಮುಖಗಳೇ ಆಗಿದ್ದಾರೆ.
* ಅರಂತೋಡು ಕ್ಷೇತ್ರದಲ್ಲಿ ಬಿಜೆಪಿಯ ಪುಷ್ಪಾ ತಮ್ಮ ಅತ್ತೆ ಕಾಂಗ್ರೆಸಿನ ಹೇಮಲತಾ ಅವರನ್ನು ಹಾಗೂ ನೆಲ್ಲೂರು ಕೆಮ್ರಾಜೆ ಕ್ಷೇತ್ರದಲ್ಲಿ ಬಿಜೆಪಿಯ ವಿದ್ಯಾ ಅತ್ತೆ ಕಾಂಗ್ರೆಸಿನ ಚಂದ್ರಕಲಾ ಅವರನ್ನು ಸೋಲಿಸಿದ್ದಾರೆ.
* ಬಂಡಾಯದ ಕಾರಣದಿಂದ ಬಿಜೆಪಿ ಈ ಬಾರಿ ಎರಡು ತಾ.ಪಂ.ಸ್ಥಾನಗಳನ್ನು ಕಳೆದುಕೊಂಡಿದೆ. ಜಾಲ್ಸೂರಿನಲ್ಲಿ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಬಂಡಾಯ ಪ್ರಬಲವಾಗಿತ್ತು. ಆದರೆ ಉಳಿದವರು ನಾಮಪತ್ರ ಹಿಂತೆಗೆದುಕೊಂಡಿದ್ದರೂ, ಆಂತರಿಕ ಅಸಮಾಧಾನ ನಿವಾರಣೆಯಾಗಿರಲಿಲ್ಲ. ಇದು ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಅದೇ ರೀತಿ ಪಂಜದಲ್ಲೂ ಗುರುಪ್ರಸಾದ್ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಅವರು ಪಡೆದ 1299 ಮತಗಳು ಬಿಜೆಪಿ ಅಭ್ಯರ್ಥಿಗೆ ಸೋಲು ಉಣಿಸಿತು.
* ಬೆಳ್ಳಾರೆಯಲ್ಲಿ ಸತತ ಐದನೇ ಬಾರಿಗೆ ಕಾಂಗ್ರೆಸ್ ಹಾಗೂ ಎಣ್ಮೂರಿನಲ್ಲಿ ಸತತ 5ನೇ ಬಾರಿ ಬಿಜೆಪಿ ಗೆದ್ದಿದೆ. ಮಡಪ್ಪಾಡಿ ಹಾಗೂ ಅರಂತೋಡಿನಲ್ಲಿ ಇದೇ ಪ್ರಥಮ ಬಾರಿಗೆ ಬಿಜೆಪಿ ಗೆಲುವಿನ ನಗೆ ಬೀರಿದೆ.