ಮಂಗಳೂರು : ಜಿ.ಪಂ ಅಧ್ಯಕ್ಷ ಸ್ಥಾನ - ಬಿಜೆಪಿಯಲ್ಲಿ ಪೈಪೋಟಿ
ಮಂಗಳೂರು,ಫೆ.22: ದ.ಕ ಜಿಲ್ಲಾ ಪಂಚಾಯತ್‌ನಲ್ಲಿ 36 ಕ್ಷೇತ್ರದಲ್ಲಿ 25 ಕ್ಷೇತ್ರಗಳಲ್ಲಿ ವಿಜಯಿಯಾಗುವ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿಯಲ್ಲಿ ಇದೀಗ ಜಿ.ಪಂ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.
ಜಿಲ್ಲಾ ಪಂಚಾಯತ್‌ನಲ್ಲಿ ಬಿಜೆಪಿ ಬಹುಮತ ಗಳಿಸಿದರೆ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖ ಅಭ್ಯರ್ಥಿಯೆಂದು ಗುರುತಿಸಲ್ಪಟ್ಟಿದ್ದ ಸಜೀಪಮುನ್ನೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಕಾಂಗ್ರೆಸ್ ಎದುರು ಸೋಲನ್ನನುಭವಿಸಿರುವುದರಿಂದ ಬಿಜೆಪಿಯಲ್ಲಿನ ಹಲವರಲ್ಲಿ ಜಿ.ಪಂ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯುಂಟಾಗಲು ಪ್ರಮುಖ ಕಾರಣವಾಗಿದೆ. ಪದ್ಮನಾಭ ಕೊಟ್ಟಾರಿ ಅವರು ಗೆಲುವು ಸಾಧಿಸಿದ್ದರೆ ಪಕ್ಷವು ಜಿ.ಪಂ ಅಧ್ಯಕ್ಷ ಸ್ಥಾನವನ್ನು ಪದ್ಮನಾಭ ಕೊಟ್ಟಾರಿಯವರಿಗೆ ನೀಡುವ ಸಾಧ್ಯತೆಯೆ ಹೆಚ್ಚಿತ್ತು. ಆದರೆ ಅವರು ಸೋಲನ್ನನುಭವಿಸಿರುವುದರಿಂದ ಅವರು ಜಿ.ಪಂ ಅಧ್ಯಕ್ಷ ಸ್ಥಾನದ ಪೈಪೋಟಿಯಿಂದ ಹೊರಗುಳಿದಿದ್ದಾರೆ.
ಹೊಸ ಅಧಿಸೂಚನೆಯ ಪ್ರಕಾರ ಜಿ.ಪಂ ಅಧ್ಯಕ್ಷ ಸ್ಥಾನ ಕ್ಯಾಬಿನೆಟ್ ದರ್ಜೆ ಆಗಿರುವುದ ಮತ್ತು ಐದು ವರ್ಷಕ್ಕೆ ಅವಧಿಯಾಗಿರುವುದರಿಂದ ಈ ಬಾರಿ ಜಿ.ಪಂ ಅಧ್ಯಕ್ಷ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿಯಿದೆ. ಬಿಜೆಪಿಯ ಹಲವು ಹಿರಿಯ ಸದಸ್ಯರು ಜಿ.ಪಂ ಗೆ ಪ್ರವೇಶ ಪಡೆದುಕೊಂಡಿದ್ದು ಅವರಲ್ಲಿ ಇದೀಗ ಅಧ್ಯಕ್ಷ ಸ್ಥಾನ ಸಿಗಬಹುದೆ ಎಂಬ ನಿರೀಕ್ಷೆ ಮೂಡಿದೆ.
ಸಂಗಬೆಟ್ಟು ಕ್ಷೇತ್ರದಿಂದ ವಿಜಯಿಯಾದ ಎಂ. ತುಂಗಪ್ಪ ಬಂಗೇರ, ಪುತ್ತಿಗೆ ಕ್ಷೇತ್ರದಲ್ಲಿ ವಿಜಯಿಯಾದ ಸುಚರಿತ ಶೆಟ್ಟಿ, ಗುತ್ತಿಗಾರು ಕ್ಷೇತ್ರದಲ್ಲಿ ವಿಜಯಿಯಾದ ಆಶಾ ತಿಮ್ಮಪ್ಪ ಗೌಡ, ಧರ್ಮಸ್ಥಳ ಕ್ಷೇತ್ರದಲ್ಲಿ ವಿಜಯಿಯಾದ ಕೆ.ಕೊರಗಪ್ಪ ನಾಯಕ್ ಬಿಜೆಪಿ ಹಿರಿಯ ಸದಸ್ಯರಾಗಿದ್ದು ಇವರುಗಳು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಇವೆಲ್ಲವೂ ಸರ್ಕಾರ ಪ್ರಕಟಿಸಲಿರುವ ಮೀಸಲಾತಿಯ ಆಧಾರದ ಮೇಲೆ ಅವಲಂಬಿತವಾಗಿದ್ದು ಸರ್ಕಾರ ಮೀಸಲಾತಿ ಪ್ರಕಟಿಸಿದ ನಂತರವಷ್ಟೆ ಅಧ್ಯಕ್ಷ ಸ್ಥಾನ ಯಾರ ಮಡಿಲಿಗೆ ಎಂಬ ಕುತೂಹಲಕ್ಕೆ ತೆರಬೀಳಲಿದೆ.
ಜಿ.ಪಂ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಪಟ್ಟಂತೆ ಮೀಸಲಾತಿ ಪ್ರಕಟಗೊಂಡ ನಂತರ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ. ಪಕ್ಷದಲ್ಲಿ ಹಲವು ಹಿರಿಯರಿದ್ದು ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ದರಾಗಲಿದ್ದಾರೆ- ಸತೀಶ್ ಕುಂಪಲ, ಮಾಜಿ ಜಿ.ಪಂ ಉಪಾಧ್ಯಕ್ಷ
ಪಕ್ಷವು ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟರೆ ಅದನ್ನು ಮಾಡಲು ಸಿದ್ದ. ಪಕ್ಷವು ಅಧ್ಯಕ್ಷ ಕೊಡಲಿ, ಕೊಡದಿರಲಿ ಅಭಿವೃದ್ದಿ ಕಾರ್ಯ ನಡೆಯುತ್ತದೆ.ಎಲ್ಲವೂ ಪಕ್ಷದ ನಿರ್ಧಾರವನ್ನು ಹೊಂದಿಕೊಂಡಿದೆ.- ಸುಚರಿತ ಶೆಟ್ಟಿ, ವಿಜಯಿ ಅಭ್ಯರ್ಥಿ
ಅಧ್ಯಕ್ಷ ಸ್ಥಾನವನ್ನು ಪಕ್ಷ ನೀಡಿದರೆ ಅದನ್ನು ನಿರ್ವಹಿಸುತ್ತೇನೆ. ಪಕ್ಷ ಈ ನಿಟ್ಟಿನಲ್ಲಿನ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ದ - ಕೆ.ಕೊರಗಪ್ಪ ನಾಯಕ್, ವಿಜಯಿ ಅಭ್ಯರ್ಥಿ.