ಮಂಗಳೂರು ತಾಲೂಕಿನಲ್ಲಿ ಅತ್ಯಧಿಕ ಮತಗಳಿಂದ ಜಯ ಸಾಧಿಸಿದ ಜಿ.ಪಂ ಅಭ್ಯರ್ಥಿ ರಶೀದಾಬಾನು
ಮಂಗಳೂರು,ಫೆ.23: ದ.ಕ ಜಿಲ್ಲಾ ಪಂಚಾಯತ್‌ನಲ್ಲಿ ಕೋಣಾಜೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ವಿಜಯಿಯಾಗಿರುವ ರಶೀದಾಬಾನು 10996 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿಯಿಂದ 4480 ಹೆಚ್ಚು ಮತಗಳನ್ನು ಗಳಿಸಿ ತಾಲೂಕಿನಲ್ಲಿ ಅತ್ಯಧಿಕ ಅಂತರದಲ್ಲಿ ಗೆಲುವು ಸಾಧಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ.
ರಾಜಕೀಯಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡಿರುವ ರಶೀದಾಬಾನು ತಮ್ಮ ಮೊದಲ ಚುನಾವಣೆಯಲ್ಲಿ ಜಿ.ಪಂ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ವಿವಾಹಿತೆಯಾಗಿರುವ ರಶೀದಾಬಾನು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಎಂ .ಎ ಮಾಡಿದ್ದಾರೆ. ಮಡಿಕೇರಿಯ ಎಫ್ ಎಂ ಸಿಯಲ್ಲಿ 2 ವರ್ಷ ರಾಜ್ಯಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದ ಅವರು ಪ್ರಸ್ತುತ ಉಳ್ಳಾಲದ ಹಜ್ರತ್ ಸಯ್ಯದ್ ಮದನಿ ಕಾಲೇಜು ಉಳ್ಳಾಲ ಇಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕಿಯಾಗಿದ್ದಾರೆ. ಇವರ ಪತಿ ಮುಹಮ್ಮದ್ ತಾಹ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಪತ್ನಿಯ ರಾಜಕೀಯ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ನಾನು ರಾಜ್ಯಶಾಸ್ತ್ರ ವಿದ್ಯಾರ್ಥಿಯಾಗಿ ರಾಜಕೀಯದ ಒಳಹೊರಗನ್ನು ತಿಳಿದುಕೊಂಡಿದ್ದೇನೆ. ಈವರೆಗೆ ರಾಜಕೀಯ ಶಾಸ್ತ್ರವನ್ನು ಅಧ್ಯಯನ ಮಾಡುವ ಮೂಲಕ ತಿಳಿದುಕೊಂಡಿದ್ದೇನೆ. ಇದೀಗ ರಾಜಕೀಯದ ನಿಜವಾದ ಅನುಭವ ಪಡೆದುಕೊಳ್ಳಲಿದ್ದೇನೆ. ಸಚಿವ ಯು .ಟಿ ಖಾದರ್, ಹಿರಿಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ನಿಡಿದ ಪ್ರೋತ್ಸಾಹದಿಂದ ಗೆಲುವು ಸಾಧ್ಯವಾಗಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲಾ ಧರ್ಮಗಳು ಸಮಾನವಾಗಿ ನೊಡಬೇಕಾಗಿದೆ. ಸೌಹಾರ್ದ ಇದ್ದರೆ ಅಭಿವೃದ್ದಿಯು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ.
- ರಶೀದಾಬಾನು,