×
Ad

ಕುರ್ನಾಡು ಜಿ.ಪಂ.ಕ್ಷೇತ್ರ ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ ಮೇಲುಗೈ

Update: 2016-02-23 17:37 IST

ಕೊಣಾಜೆ: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪ್ರತಿಷ್ಠೆಯ ಹಾಗೂ ಜಿದ್ದಾಜಿದ್ದಿನ ಕ್ಷೇತ್ರೆವೆಂದೇ ಪರಿಗಣಿಸಲಾಗಿದ್ದ ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
   
ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಹಾಗೂ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರು ಆಗಿದ್ದ ಮಮತಾ ಡಿ.ಎಸ್.ಗಟ್ಟಿ ಅವರು ಕಾಂಗ್ರೆಸ್ ಪಕ್ಷದಿಂದ ಇಲ್ಲಿ ಸ್ಪರ್ಧೆಗೆ ಇಳಿದಿದ್ದರೆ, ಬಿಜೆಪಿಯಿಂದ ಶಕಿಲಾ ಜನಾರ್ದನ್ ಅವರು ಕಣಕ್ಕಿಳಿದ್ದಿದ್ದರು. ಚುನಾವಣಾ ಹೋರಾಟದಲ್ಲಿ ಮತದಾರರು ಕಾಂಗ್ರೆಸ್‌ಗೆ ಒಲವು ತೋರಿದ ಕಾರಣ ಮಮತಾ ಗಟ್ಟಿ ಅವರು ಗೆಲುವು ಸಾಧಿಸಿದ್ದಾರೆ. ಕಳೆದ ಅವಧಿಯಲ್ಲಿ ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಬಿಜೆಪಿಯ ಸಂತೋಷ್ ಕುಮಾರ್ ಬೋಳಿಯಾರ್ ಅವರು ಕಾಂಗ್ರೆಸ್‌ನ ಎ.ಸಿ.ಭಂಡಾರಿಯವರನ್ನು ಸೋಲಿಸಿದ್ದರು. ಕುರ್ನಾಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೂರು ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿಯೂ ಈ ಬಾರಿ ಎರಡು ಕಾಂಗ್ರೆಸ್ ಹಾಗೂ ಒಂದು ಸ್ಥಾನವನ್ನು ಬಿಜೆಪಿ ಪಡೆದುಕೊಂಡಿದೆ. ಕೈರಂಗಳ ಬಾಳೆಪುಣಿಯಲ್ಲಿ ಬಿಜೆಪಿ ಪಕ್ಷದಿಂದ ಸಿರಾಜುದ್ದೀನ್ ಕಣಕ್ಕಿಳಿದ್ದಿದ್ದು, ಕಾಂಗ್ರೆಸ್‌ನಿಂದ ಹೈದರ್ ಕೈರಂಗಳ ಕಣಕ್ಕಿಳಿದಿದ್ದರು. ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್‌ನ ಹೈದರ್ ಕೈರಂಗಳ ಅವರು 400ಕ್ಕೂ ಹೆಚ್ಚು ಮತಗಳ ಅಂತರದಿಂದ ಇಲ್ಲಿ ಜಯಗಳಿಸಿದ್ದಾರೆ.

ಇರಾ ನರಿಂಗಾನ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚಂದ್ರಹಾಸ್ ಕರ್ಕೇರಾ ಅವರು ಬಿಜೆಪಿಯ ಪ್ರೇಮಾನಂದ ರೈ ಅವರನ್ನು ಮಣಿಸಿದ್ದಾರೆ. ಪಜೀರು ಕುರ್ನಾಡು ಕ್ಷೇತ್ರದಲ್ಲಿ ಬಿಜೆಪಿಯ ನವೀನ್ ಪಾದಲ್ಪಾಡಿ ಅವರು ಕಾಂಗ್ರೆಸ್‌ನ ಉಮ್ಮರ್ ಪಜೀರ್ ಅವರನ್ನು ಅಲ್ಪ ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪ್ರತಿಷ್ಠೆಯ ಕ್ಷೇತ್ರವಾಗಿದ್ದ ಇಲ್ಲಿ ಕಳೆದ ಎರಡು ದಿನಗಳ ಹಿಂದೆ ರಾಜಕೀಯ ವೈಷಮ್ಯದೊಂದಿಗೆ ಗುಂಪುಗಳ ನಡುವೆ ಹೊಡೆದಾಟವೂ ಸಂಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News