ಪುತ್ತೂರು : ಸೋತ, ಗೆದ್ದ ಪ್ರಮುಖರು
ಜಿಪಂ ಕ್ಷೇತ್ರ
ಕೃಷ್ಣ ಶೆಟ್ಟಿ ಕಡಬ
ಪುತ್ತೂರು ಎಪಿಎಂಸಿ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ ಸದಸ್ಯ ಬಿಜೆಪಿ ನಾಯಕ ಕೃಷ್ಣ ಶೆಟ್ಟಿ ಈ ಬಾರಿ ಕಡಬ ಕ್ಷೇತ್ರದಿಂದ ಬಿಜೆಪಿಯಲ್ಲಿ ಜಿಪಂ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದು ಈಕಾಂಗ್ರೆಸ್ ಅಭ್ಯರ್ಥಿ ಪಿ ಪಿ ವರ್ಗಿಸ್ ವಿರುದ್ದ ಸೋಲು ಕಂಡಿದ್ದಾರೆ. ಇವರು 2006ರಿಂದ 2011ರ ತನಕ ಜಿ.ಪಂ ಸದಸ್ಯರಾಗಿದ್ದರು. ಬಿಜೆಪಿಯ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದ ಇವರು ತನ್ನ ಪ್ರತಿಸ್ಪರ್ಧಿಪಿ ಪಿ ವರ್ಗಿಸ್ ವಿರುದ್ದ 216 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ಬಾಲಕೃಷ್ಣ ಬಾಣಜಾಲು ನೆಲ್ಯಾಡಿ ಜಿಪಂ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಬಾಲಕೃಷ್ಣ ಬಾಣಜಾಲು ಈ ಬಾರಿಯ ಚುನಾವಣೆಯಲ್ಲಿ ತನ್ನ ಪ್ರತಿಸ್ಪರ್ದಿ ಕಾಂಗ್ರೆಸ್ ಸರ್ವೋತ್ತಮ ಗೌಡರ ವಿರುದ್ದ ಅಂತರದಿಂದ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿಯ ಟಿಕೇಟ್ ಹಂಚಿಕೆಯಲ್ಲಿ ಆಗಿರುವ ಗೊಂದಲದಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯವಾಗಿ ಧನಂಜಯ ಕೊಡಂಗೆ ಸ್ಪರ್ಧಿಸಿದ್ದರು. ಇದರಿಂದಾಗಿ ಬಾಲಕೃಷ್ಣ ಬಾಣಜಾಲು ಸೋಲು ಕಂಡಿದ್ದಾರೆ. ಗೆದ್ದ ಪ್ರಮುಖರು: ಪ್ರತಿಷ್ಠಿತ ಕ್ಷೇತ್ರವಾದ ನೆಟ್ಟಣಿಗೆ ಮುಡ್ನೂರು ಜಿಪಂ ಕ್ಷೇತ್ರ ಈ ಬಾರಿ ಕಾಂಗ್ರೆಸ್ ಪಾಲಾಗಿದೆ. ಇಲ್ಲಿ ಸತತವಾಗಿ ಎರಡು ಅವಧಿಯಲ್ಲಿ ಬಿಜೆಪಿ ಗೆಲುವು ಸಾಧಿಸುರುವ ಕ್ಷೇತ್ರದಲ್ಲಿ ಈ ಬಾರಿ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ನಿಕಟ ಪೂರ್ವ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪತ್ನಿ ಅನಿತಾ ಹೇಮನಾಥ ಶೆಟ್ಟಿ ಗೆಲುವು ಸಾಧಿಸಿದ್ದಾರೆ. ಜಿದ್ದಾಜಿದ್ದಿನ ಹೋರಾಟದ ಕಣವಾಗಿದ್ದ ಈ ಕ್ಷೇತ್ರದಲ್ಲಿ ಭಾರೀ ಮಟ್ಟದಲ್ಲಿ ಚುನಾವಣಾ ಪ್ರಚಾರ ನಡೆದಿತ್ತು ಮಾತ್ರವಲ್ಲದೆ ವಿವಿಧ ಪಕ್ಷಗಳ ಹಿರಿಯ ನಾಯಕರುಗಳು ಇಲ್ಲಿ ಬಂದು ಚುನಾವಣಾ ಪ್ರಚಾರ ನಡೆಸಿದ್ದರು. ಅನಿತಾ ಹೇಮನಾಥ ಶೆಟ್ಟಿ 2006ರಿಂದ 2011ರ ತನಕ ಜಿ.ಪಂ ಸದಸ್ಯರಾಗಿದ್ದರು. ಮಾಜಿ ಜಿ.ಪಂ ಸದಸ್ಯೆ ಬಿಜೆಪಿಯ ಶಯನಾ ಜಯಾನಂದ ಅವರು ಅವರು ತಮ್ಮ ಪ್ರತಿಸ್ಪರ್ಧಿ ಅನಿತಾ ಕೇಶವ ಗೌಡ ಅವರನ್ನು 2722 ಮತಗಳ ಅಂತರದಿಂದ ಸೋಲಿಸಿದ್ದಾರೆ. ಶಯನಾ ಜಯಾನಂದ ಅವರು 2006ರಿಂದ 2011ರ ತನಕ ಜಿ.ಪಂ ಸದಸ್ಯರಾಗಿದ್ದರು. ಕಳೆದ ಬಾರಿ ಜಿ.ಪಂ ಸದಸ್ಯೆಯಾಗಿದ್ದ ಕಾಂಗ್ರೆಸ್‌ನ ಕುಮಾರಿ ವಾಸುದೇವನ್ ಈ ಬಾರಿ ತಾ.ಪಂ ಐತ್ತೂರು ತಾ.ಪಂ ಕ್ಷೇತ್ರದಿಂದ ಸ್ಪರ್ಧಿಸಿದ್ದು, ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಹೊಸ ಮುಖ ಕುಸುಮ ಅವರ ಮುಂದೆ ಸೋಲು ಕಂಡಿದ್ದಾರೆ. ಮಾಜಿ. ಜಿ.ಪಂ. ಸದಸ್ಯ ಬಿಜೆಪಿಯ ಸಾಜ ರಾಧಾಕೃಷ್ಣ ಆಳ್ವ ಅವರು ಆರ್ಯಾಪು ತಾ.ಪಂ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಇವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಹಾಬಲ ರೈ ಅವರನ್ನು ಸೋಲಿಸಿದ್ದಾರೆ. ಜಿ.ಪಂನ ನಿಕಟಪೂರ್ವ ಸದಸ್ಯೆ ಹಾಗೂ 2 ಬಾರಿ ಜಿ.ಪಂ ಸದಸ್ಯೆಯಾಗಿದ್ದ ಬಿಜೆಪಿಯ ಮೀನಾಕ್ಷಿ ಮಂಜುನಾಥ್ ಅವರು ಈ ಬಾರಿ ಬೆಟ್ಟಂಪಾಡಿ ತಾ.ಪಂ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅನಿತಾ ಅವರನ್ನು ಸೋಲಿಸಿದ್ದಾರೆ.
ತಾಪಂ ಕ್ಷೇತ್ರ ಮಹಮ್ಮದ್ ಬಡಗನ್ನೂರು ತಾ.ಪಂನ ಮಾಜಿ ಅಧ್ಯಕ್ಷ ಕಳೆದ 3 ಬಾರಿ ತಾ.ಪಂ ಸದಸ್ಯರಾಗಿದ್ದ ಅನುಭವಿ ರಾಜಕಾರಣಿ ಎಂದೇ ಹೆಸರು ಪಡೆದಿದ್ದ ಮಹಮ್ಮದ್ ಬಡಗನ್ನೂರು ಅವರು ಸೋಲು ಕಂಡಿದ್ದಾರೆ. ಕಳೆದ ಬಾರಿ ನೆಟ್ಟಣಿಗೆ ಮುಡ್ನೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲವು ಕಂಡಿದ್ದ ತಾಪಂ ಸದಸ್ಯ ಮಹಮ್ಮದ್ ಬಡಗನ್ನೂರು ಈ ಬಾರಿ ಮೀಸಲಾತಿ ಕಾರಣದಿಂದ ತನ್ನ ಕ್ಷೇತ್ರ ಬದಲಿಸಿದ್ದು ಅರಿಯಡ್ಕ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇಲ್ಲಿ ತನ್ನ ಪ್ರತಿಸ್ಪರ್ಧಿ ತಾಪಂ ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವಿರುದ್ದ ಸೋಲು ಕಂಡಿದ್ದಾರೆ. ನೋಟಾ ಮತದಾರರು: ಈ ಬಾರಿಯ ಚುನಾವಣೆಯಲ್ಲಿ ತಾಲೂಕಿನಲ್ಲಿ ದಾಖಲೆಯ ನೋಟಾ ಮತದಾನವಾಗಿದೆ. ಒಟ್ಟು 6 ಕ್ಷೇತ್ರಗಳ 1,82,348 ಮತದಾರರ ಪೈಕಿ 1,30,322 ಮತದಾರರು ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಈ ಪೈಕಿ 3.221 ನೋಟಾ(ನನ್ ಆಫ್ ದಿ ಎಬವ್) ಮತ ಚಲಾವಣೆಯಾಗಿದೆ. ಉಪ್ಪಿನಂಗಡಿ ಕ್ಷೇತ್ರದಲ್ಲಿ ಗರಿಷ್ಠ 789 ನೋಟಾ ಮತ ಚಲಾವಣೆಯಾಗಿದೆ. ಬೆಳಂದೂರು ಕ್ಷೇತ್ರದಲ್ಲಿ 2 ಮತ್ತು ಉಪ್ಪಿನಂಗಡಿ ಕ್ಷೇತ್ರದಲ್ಲಿ 1 ಮತ ತಿರಸ್ಕೃತಗೊಂಡಿದೆ.