ಉಳ್ಳಾಲ : ತಾ.ಪಂ. ಜಿ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯ: ಕಾರ್ಯಕರ್ತರಿಂದ ಸಂಭ್ರಮಾಚರಣೆ

Update: 2016-02-23 13:54 GMT

 ಉಳ್ಳಾಲ: ಜಿ.ಪಂ. ತಾ.ಪಂ. ಚುನಾವಣೆಯಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಭಾರೀ ಬಹುಮತದಿಂದ ಜಯಗಳಿಸಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಜಯೋತ್ಸವವನ್ನು ಆಚರಿಸಿದರು. ಬಾಳೆಪುಣಿ ಕೈರಂಗಳ ಗ್ರಾಮದಲ್ಲಿ ಅತ್ಯಧಿಕ ಮತಗಳಿಂದ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಹೈದರ್ ಕೈರಂಗಳ, ನರಿಂಗಾನಗ್ರಾ.ಪಂ.ನಲ್ಲಿ ಜಯಗಳಿಸಿದ ಚಂದ್ರಹಾಸ್ ಕರ್ಕೇರಾ, ಕುರ್ನಾಡು ಜಿ.ಪಂ. ಕ್ಷೇತ್ರದಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಮಮತಾಗಟ್ಟಿ ಕುರ್ನಾಡು ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಏಳು ಗ್ರಾಮಗಳಿಗೆ ತೆರಳಿ ಶುಭಹಾರೈಸಿದರು. ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ವಿಜೇತರಾದ ಅಭ್ಯರ್ಥಿಗಳ ಜತೆ ವಾಹನಗಳ ಮೂಲಕ ರ್ಯಾಲಿಯಲ್ಲಿ ತೆರಳಿದ ಪಕ್ಷದ ಕಾರ್ಯಕರ್ತರು ಸಂಭ್ರಮಿಸಿದರು. ಕೊಣಾಜೆ ಜಿ.ಪಂ. ಕ್ಷೇತ್ರದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮತಗಳ ಬಿಜೆಪಿ ಅಭ್ಯರ್ಥಿ ಪೂರ್ಣಿಮ ಅವರ ವಿರುದ್ಧ ಕಾಂಗ್ರೆಸ್‌ನ ರಶೀದಾಬಾನು ಜಯಗಳಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಕಾರ್ಯಕರ್ತರು ಈ ವ್ಯಾಪ್ತಿಯತಾ.ಪಂ. ಕ್ಷೇತ್ರದಲ್ಲಿಜಯಭೇರಿ ಸಾದಿಸಿದ ಕಾಂಗ್ರೆಸ್ ಅಭ್ಯರ್ಥಿಗಳ ಜತೆ ಎಲ್ಲಾ ಗ್ರಾಮಗಳಿಗೆ ತೆರಳಿ ಸಂಭ್ರಮ ಆಚರಿಸಿದರು.

ಭಾರೀ ಪೈಪೋಟಿ ನೀಡಿದ್ದ ಮೂವರು ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದ ಬಾಳೆಪುಣಿ ಕೈರಂಗಳ ತಾ.ಪಂ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿರಾಜುದ್ದೀನ್‌ರವರನ್ನು ಭಾರೀ ಅಂತರದಲ್ಲಿ ಕಾಂಗ್ರೆಸ್‌ನ ಹೈದರ್ ಕೈರಂಗಳರವರು ಸೋಲಿಸಿ ಜಯಭೇರಿ ಸಾಧಿಸಿದ್ದಾರೆ. ಭಾರೀ ಕುತೂಹಲಕಾರಿ ಕ್ಷೇತ್ರವಾಗಿದ್ದ ಮಂಜನಾಡಿ ತಾ.ಪಂ. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮೂರನೇ ಸ್ಥಾನವನ್ನು ಪಡಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಸುರೇಖ 2797 ಮತಗಳನ್ನು ಪಡೆದು ಎಸ್‌ಡಿಪಿಐ ವಿರುದ್ಧ ಜಯಗಳಿಸಿದ್ದಾರೆ. ಇಲ್ಲಿ ಎಸ್‌ಡಿಪಿಐ 1304 ಮತಗಳನ್ನು ಪಡೆದರೆ ಬಿಜೆಪಿ ಕೇವಲ 599 ಮತಗಳಿಗೆ ತೃಪಿಪಟ್ಟುಕೊಂಡಿದೆ. ಪ್ರಕಟಗೊಂಡ ಫಲಿತಾಂಶದಲ್ಲಿ ಮಂಗಳೂರು ಕ್ಷೇತ್ರದ ನಾಲ್ಕು ಜಿ.ಪಂ. ಕ್ಷೇತ್ರಗಳ ಪೈಕಿ ಕೊಣಾಜೆ ಮತ್ತು ಕುರ್ನಾಡು ಕಾಂಗ್ರೆಸ್ ಪಾಲಾದರೆ ಸೋಮೇಶ್ವರ ಮತ್ತು ಪುದು ಜಿ.ಪಂ. ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ. ತಾ.ಪಂ. ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ಉಳಿದ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ.  ಸೋಮೇಶ್ವರ1 , ಸೋಮೇಶ್ವರ2, ಕುರ್ನಾಡು, ಪುದು ತಾ.ಪಂ. ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ. ಕೆಲವು ಸಮಯಗಳಿಂದ ತಾ.ಪಂ. ಕ್ಷೇತ್ರದಲ್ಲಿ ಸ್ಪರ್ದಿಸಿ ಜಯಗಳಿಸುತ್ತಿದ್ದ ಉಮ್ಮರ್ ಪಜೀರ್ ಈ ಬಾರಿ ಕುರ್ನಾಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಪ್ರಥಮವಾಗಿ ಸೋಲುಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News