×
Ad

ಸಿಖ್ ಹಾಸ್ಯ ನಟನ ಪೇಟ ಬಿಚ್ಚಿಸಿದ ಭದ್ರತಾ ಸಿಬ್ಬಂದಿ

Update: 2016-02-23 19:32 IST

ಸ್ಯಾನ್‌ಫ್ರಾನ್ಸಿಸ್ಕೊ, ಫೆ. 23: ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ನಗರದ ವಿಮಾನ ನಿಲ್ದಾಣದಲ್ಲಿ ನಡೆದ ಭದ್ರತಾ ತಪಾಸಣೆಯ ವೇಳೆ, ಭಾರತ-ಕೆನಡಿಯನ್ ಸಿಖ್ ಹಾಸ್ಯ ನಟರೊಬ್ಬರ ಪೇಟವನ್ನು ಭದ್ರತಾ ಸಿಬ್ಬಂದಿ ತೆಗೆಸಿದ ಘಟನೆ ವರದಿಯಾಗಿದೆ.

ಇಂಟರ್‌ನೆಟ್‌ನಲ್ಲಿ ‘ಜಸ್‌ರೀನ್’ ಎಂಬುದಾಗಿ ಪರಿಚಿತರಾಗಿರುವ ಜಸ್ಮೀತ್ ಸಿಂಗ್, ಈ ಘಟನೆಯ ಬಗ್ಗೆ ಟ್ವಿಟರ್‌ನಲ್ಲಿ ಬರೆದಿದ್ದಾರೆ ಎಂದು ‘ನ್ಯೂಯಾರ್ಕ್ ಡೇಲಿ’ ವರದಿ ಮಾಡಿದೆ.

‘‘ಹೆಚ್ಚುವರಿ ತಪಾಸಣೆಯ ವೇಳೆ, ಪೇಟವನ್ನು ತೆಗೆಯುವಂತೆ ಭದ್ರತಾ ಸಿಬ್ಬಂದಿ ಸೂಚಿಸಿದರು. ಇಲ್ಲದಿದ್ದರೆ, ನನಗೆ ವಿಮಾನ ಹತ್ತಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು’’ ಎಂದು ಸಿಂಗ್‌ರ ಟ್ವೀಟ್ ಹೇಳಿದೆ.

 ‘‘ನನ್ನ ಪೇಟದಲ್ಲಿ ಆಕ್ಷೇಪಾರ್ಹವಾದ ಏನೂ ಅವರಿಗೆ ಸಿಗಲಿಲ್ಲ. ಯಾಕೆಂದರೆ, ಅದರಲ್ಲಿ ಇರುವುದು ಬಟ್ಟೆ ಮಾತ್ರ. ಆಗ ನಾನು ಪೇಟವನ್ನು ಮರಳಿ ಕಟ್ಟಲು ಕನ್ನಡಿ ಕೇಳಿದೆ’’.

‘‘ಇಲ್ಲಿ ಕನ್ನಡಿಗಳಿಲ್ಲ. ನೀವು ಟರ್ಮಿನಲ್‌ನಲ್ಲಿ ಅತ್ಯಂತ ಹತ್ತಿರದಲ್ಲಿ ಇರುವ ಶೌಚಾಲಯಕ್ಕೆ ಹೋಗಬಹುದು ಎಂದು ಅವರು ಸೂಚಿಸಿದರು’’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇಂಥದೇ ಇನ್ನೊಂದು ಘಟನೆ ಫೆಬ್ರವರಿ 9ರಂದು ನಡೆದಿರುವುದನ್ನು ಸ್ಮರಿಸಬಹುದಾಗಿದೆ. ಸಿಖ್ ಅಮೆರಿಕನ್ ನಟ ವಾರಿಸ್ ಅಹ್ಲುವಾಲಿಯ ಭದ್ರತಾ ತಪಾಸಣೆಯ ವೇಳೆ ತನ್ನ ಪೇಟ ತೆಗೆಯಲು ನಿರಾಕರಿಸಿದುದಕ್ಕಾಗಿ, ಮೆಕ್ಸಿಕೊ ಸಿಟಿಯಿಂದ ನ್ಯೂಯಾರ್ಕ್‌ಗೆ ಹಾರುವ ವಿಮಾನ ಏರಲು ಅವರಿಗೆ ಅವಕಾಶ ನೀಡಿರಲಿಲ್ಲ.

ಆದರೆ, ಬಳಿಕ ವಿಮಾನ ಯಾನ ಕಂಪೆನಿ ತನ್ನ ಕೃತ್ಯಕ್ಕಾಗಿ ಕ್ಷಮೆ ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News