3,000 ವರ್ಷಗಳಲ್ಲೇ ವೇಗವಾಗಿ ಏರುತ್ತಿರುವ ಸಮುದ್ರ ಮಟ್ಟ
ವಾಶಿಂಗ್ಟನ್, ಫೆ. 23: ಕಳೆದ ಸುಮಾರು 3,000 ವರ್ಷಗಳ ಅವಧಿಯ ಇತಿಹಾಸದಲ್ಲಿ 20ನೆ ಶತಮಾನದಲ್ಲಿ ಕಂಡುಬಂದಷ್ಟು ವೇಗವಾಗಿ ಸಮುದ್ರಗಳ ಮಟ್ಟ ಯಾವತ್ತೂ ಹೆಚ್ಚಿರಲಿಲ್ಲ ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ.
ಈ ಉದ್ದೇಶಕ್ಕಾಗಿ ವಿಜ್ಞಾನಿಗಳು ಈ ಅವಧಿಯಲ್ಲಿನ ಭೂಮಿಯ ಸಮುದ್ರ ಮಟ್ಟಗಳ ಇತಿಹಾಸವನ್ನು ಪುನರ್ರಚಿಸಿದ್ದಾರೆ.
‘‘20ನೆ ಶತಮಾನದಲ್ಲಿನ ಸಮುದ್ರ ಮಟ್ಟ ಏರಿಕೆಯ ದರ ಅದಕ್ಕಿಂತ ಹಿಂದಿನ 27 ಶತಮಾನಗಳಲ್ಲಿ ಕಂಡುಬಂದಿರುವುದಕ್ಕಿಂತ ವೇಗವಾಗಿತ್ತು ಎಂಬುದನ್ನು ನಾವು 95 ಶೇಕಡ ನಿಖರತೆಯೊಂದಿಗೆ ಹೇಳುತ್ತೇವೆ’’ ಎಂದು ರಟ್ಜರ್ಸ್ ವಿಶ್ವವಿದ್ಯಾನಿಲಯದಲ್ಲಿ ಪರಿಸರ ವಿಜ್ಞಾನಿಯಾಗಿರುವ ಬಾಬ್ ಕಾಪ್ ಹೇಳಿದರು.
ಹಲವಾರು ಅಮೆರಿಕ ಮತ್ತು ಜಾಗತಿಕ ವಿಶ್ವವಿದ್ಯಾಲಯಗಳ ವಿಜ್ಞಾನಿಗಳನ್ನೊಳಗೊಂಡ 10 ಸದಸ್ಯರ ಸಂಶೋಧನಾ ತಂಡದ ನೇತೃತ್ವವನ್ನು ಅವರು ವಹಿಸಿದ್ದರು.
ಅಧ್ಯಯನವು ‘ಪ್ರೊಸೀಡಿಂಗ್ಸ್ ಆಫ್ ದ ನ್ಯಾಶನಲ್ ಅಕಾಡೆಮಿ ಆಫ್ ಸಯನ್ಸಸ್’ನಲ್ಲಿ ಸೋಮವಾರ ಪ್ರಕಟವಾಗಿದೆ.
ಸಮುದ್ರಗಳ ಮಟ್ಟ 1900ರಿಂದ 2000ದವರೆಗೆ 14 ಸೆಂಟಿ ಮೀಟರ್‌ನಷ್ಟು ಏರಿದೆ ಎಂದು ನೂತನ ಅಧ್ಯಯನ ಹೇಳುತ್ತದೆ. ಅಂದರೆ, ವರ್ಷಕ್ಕೆ 1.4 ಮಿಲಿಮೀಟರ್ ದರದಲ್ಲಿ ಈ ಏರಿಕೆಯಾಗಿದೆ.
ಸಮುದ್ರ ಮಟ್ಟ ಏರಿಕೆಯ ಹಾಲಿ ದರ ವರ್ಷಕ್ಕೆ 3.4 ಮಿಲಿಮೀಟರ್ ಆಗಿದೆ ಎಂದು ನಾಸಾ ಹೇಳಿದ್ದು, ಈ ದರ ಈಗಲೂ ಏರುತ್ತಿದೆ ಎಂದಿದೆ.
ನಿರೀಕ್ಷಿಸಿದಂತೆಯೇ, 20ನೆ ಶತಮಾನದ ಸಮುದ್ರ ಮಟ್ಟ ಏರಿಕೆಗೆ ಜಾಗತಿಕ ತಾಪಮಾನ ಕಾರಣ ಎಂದು ಅಧ್ಯಯನ ಹೇಳುತ್ತದೆ. ಅಷ್ಟೇ ಅಲ್ಲ, ಅಧ್ಯಯನವು ಇನ್ನಷ್ಟು ಲೆಕ್ಕಾಚಾರಗಳನ್ನು ನಡೆಸಿದೆ. ಒಂದು ವೇಳೆ, 20ನೆ ಶತಮಾನದಲ್ಲಿ ಮಾನವರು ಭೂಗ್ರಹವನ್ನು ಬಿಸಿ ಮಾಡದಿದ್ದರೆ, ಆ ಶತಮಾನದಲ್ಲಿ ಸಮುದ್ರಗಳ ಮಟ್ಟ ಇಷ್ಟೊಂದು ಪ್ರಮಾಣದಲ್ಲಿ ಏರುವ ಸಾಧ್ಯತೆಯಿರಲಿಲ್ಲ. 14 ಸೆಂಟಿ ಮೀಟರ್ ಏರಿಕೆಯ ಬದಲಿಗೆ, ಸಮುದ್ರದ ಮಟ್ಟ 3 ಸೆಂಟಿ ಮೀಟರ್ ಇಳಿಕೆ ಮತ್ತು 7 ಸೆಂಟಿ ಮೀಟರ್ ಏರಿಕೆಯ ನಡುವಿನ ಯಾವುದಾದರೂ ಘಟ್ಟದಲ್ಲಿ ಇರುತ್ತಿತ್ತು ಎಂದಿದೆ.