×
Ad

ಸಿರಿಯ: ಫೆ. 27ರಂದು ಯುದ್ಧವಿರಾಮ ಜಾರಿ

Update: 2016-02-23 19:52 IST

ಅಮೆರಿಕ, ರಶ್ಯ ಘೋಷಣೆ; ಶರತ್ತುಬದ್ಧ: ಪ್ರತಿಪಕ್ಷ; ಉಗ್ರ ಗುಂಪುಗಳಿಗೆ ಅನ್ವಯಿಸದು

ಬೆರೂತ್, ಫೆ. 23: ಯುದ್ಧಪೀಡಿತ ಸಿರಿಯದಲ್ಲಿ ಫೆಬ್ರವರಿ 27ರಂದು ಮಹತ್ವದ ಯುದ್ಧವಿರಾಮ ಜಾರಿಗೆ ಬರುತ್ತದೆ ಎಂದು ಅಮೆರಿಕ ಮತ್ತು ರಶ್ಯಗಳು ಸೋಮವಾರ ಘೋಷಿಸಿವೆ.

ಸುಮಾರು ಐದು ವರ್ಷಗಳ ಸಂಘರ್ಷದ ಇತಿಹಾಸದಲ್ಲೇ ಅತ್ಯಂತ ಮಾರಕ ದಾಳಿಯೊಂದನ್ನು ಉಗ್ರರು ನಡೆಸಿದ ಒಂದು ದಿನದ ಬಳಿಕ ಈ ಘೋಷಣೆ ಹೊರಬಿದ್ದಿದೆ. ಡಮಾಸ್ಕಸ್ ಸಮೀಪ ಸಂಭವಿಸಿದ ಸರಣಿ ಸ್ಫೋಟಗಳಲ್ಲಿ 134 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಹೆಚ್ಚಿನವರು ನಾಗರಿಕರು.

ಸಿರಿಯದ ಪ್ರಮುಖ ಪ್ರತಿಪಕ್ಷಗಳ ಒಕ್ಕೂಟ ಯುದ್ಧವಿರಾಮ ಘೋಷಣೆಯನ್ನು ಶರತ್ತುಬದ್ಧವಾಗಿ ಸ್ವೀಕರಿಸಿದೆ.

ಆಂಶಿಕ ಯುದ್ಧವಿರಾಮ ಶುಕ್ರವಾರ ಮಧ್ಯರಾತ್ರಿ ಜಾರಿಗೆ ಬರುತ್ತದೆ ಹಾಗೂ ಅದು ಸಂಘರ್ಷಕ್ಕೆ ಸಂಬಂಧಪಟ್ಟ ಎಲ್ಲ ಪಕ್ಷಗಳಿಗೆ ಅನ್ವಯವಾಗುತ್ತದೆ ಎಂದು ಜಂಟಿ ಹೇಳಿಕೆಯೊಂದರಲ್ಲಿ ವಾಶಿಂಗ್ಟನ್ ಮತ್ತು ಮಾಸ್ಕೊ ಹೇಳಿವೆ.

ಆದಾಗ್ಯೂ, ಯುದ್ಧವಿರಾಮವು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಮತ್ತು ಅಲ್-ಖಾಯಿದಕ್ಕೆ ನಿಷ್ಠೆ ಹೊಂದಿರುವ ಅಲ್-ನುಸ್ರ ಫ್ರಂಟ್‌ಗೆ ಅನ್ವಯಿಸುವುದಿಲ್ಲ ಎಂದಿದೆ.

ಯುದ್ಧವಿರಾಮ ಒಪ್ಪಂದಕ್ಕೆ ಸೇರ್ಪಡೆಗೊಳ್ಳುವ ಇಚ್ಛೆಯುಳ್ಳ ಪಕ್ಷಗಳು ತಮ್ಮ ಇಂಗಿತವನ್ನು ರಶ್ಯ ಅಥವಾ ಅಮೆರಿಕಕ್ಕೆ ಶುಕ್ರವಾರ ಮಧ್ಯಾಹ್ನದ ಒಳಗೆ ತಿಳಿಸಬೇಕಾಗಿದೆ.

ಎ.13ರಂದು ಸಂಸದೀಯ ಚುನಾವಣೆ: ಬಶರ್

ಡಮಾಸ್ಕಸ್ (ಸಿರಿಯ), ಫೆ. 23: ಸಿರಿಯದ ಸಂಸತ್ತಿಗೆ ಎಪ್ರಿಲ್ 13ರಂದು ಚುನಾವಣೆ ನಡೆಯಲಿದೆ ಎಂದು ಅಧ್ಯಕ್ಷ ಬಶರ್ ಅಲ್-ಅಸಾದ್ ಸೋಮವಾರ ಪ್ರಕಟಿಸಿದ್ದಾರೆ ಎಂದು ಸರಕಾರಿ ವಾರ್ತಾ ಸಂಸ್ಥೆ ‘ಸನ’ ವರದಿ ಮಾಡಿದೆ.

ವಾಶಿಂಗ್ಟನ್ ಮತ್ತು ಮಾಸ್ಕೊಗಳು ಯುದ್ಧವಿರಾಮ ಘೋಷಿಸಿದ ಸ್ವಲ್ಪವೇ ಹೊತ್ತಿನಲ್ಲಿ ಈ ಘೋಷಣೆ ಹೊರಬಿದ್ದಿದೆ.

ಸಿರಿಯದ ಪ್ರತಿ ರಾಜ್ಯಗಳಿಗೆ ಸಂಸದೀಯ ಸ್ಥಾನಗಳನ್ನು ನಿಗದಿಪಡಿಸಿ ಅಸಾದ್ ಆದೇಶವೊಂದನ್ನು ಹೊರಡಿಸಿದ್ದಾರೆ. ಸಿರಿಯದಲ್ಲಿ ಈ ಹಿಂದೆ 2012 ಮೇ ತಿಂಗಳಲ್ಲಿ ಚುನಾವಣೆ ನಡೆದಿತ್ತು.

ಭರವಸೆಯ ಸಂಕೇತ: ಮೂನ್

ವಿಶ್ವಸಂಸ್ಥೆ, ಫೆ. 23: ಸಿರಿಯದಲ್ಲಿ ಏರ್ಪಟ್ಟ ಯುದ್ಧವಿರಾಮವನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಸೋಮವಾರ ಸ್ವಾಗತಿಸಿದ್ದಾರೆ. ಒಪ್ಪಂದ ‘‘ಸುದೀರ್ಘ ಸಮಯದಿಂದ ಕಾಯುತ್ತಿದ್ದ ಭರವಸೆಯ ಸಂಕೇತ’’ವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

‘‘ಯುದ್ಧವಿರಾಮ ಕುರಿತ ಒಪ್ಪಂದವು, ಐದು ವರ್ಷಗಳ ಸಂಘರ್ಷದ ಬಳಿಕ ಜನರ ಸಂಕಟದ ಕೊನೆಯು ಸನ್ನಿಹಿತವಾಗಿದೆ ಎಂಬುದನ್ನು ಸೂಚಿಸುವ ಭರವಸೆಯ ಸಂಕೇತವಾಗಿರಬಹುದಾಗಿದೆ’’ ಎಂದು ಮೂನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News