ಕನ್ಹಯ್ಯಗೆ ದೊರೆಯದ ಜಾಮೀನು, ಯಥಾಸ್ಥಿತಿ ವರದಿ ಸಲ್ಲಿಕೆಗೆ ದಿಲ್ಲಿ ಹೈಕೋರ್ಟ್ ಆದೇಶ

Update: 2016-02-23 14:56 GMT

  ಹೊಸದಿಲ್ಲಿ,ಫೆ.23: ಜಾಮೀನು ಬಿಡುಗಡೆ ಕೋರಿ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ನಾಯಕ ಕನ್ಹಯ್ಯಾಲಾಲ್ ಸಲ್ಲಿಸಿದ ಮನವಿಯ ಅಲಿಕೆಯನ್ನು ದಿಲ್ಲಿ ಹೈಕೋರ್ಟ್ ಬುಧವಾರಕ್ಕೆ ಮಂದೂಡಿದ್ದು, ಪ್ರಕರಣದ ತನಿಖೆಗೆ ಸಂಬಂಧಿಸಿ ಯಥಾಸ್ಥಿತಿ ವರದಿಯನ್ನು ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ತಿಳಿಸಿದೆ.ದಿಲ್ಲಿ ಪೊಲೀಸರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ತುಷಾರ್ ಮೆಹ್ತಾ ಅವರು ಕನ್ಹಯ್ಯಾ ಅವರ ಜಾಮೀನು ಮನವಿಯನ್ನು ವಿರೋಧಿಸುವುದಾಗಿ ತಿಳಿಸಿದಾಗ, ನ್ಯಾಯಾಧೀಶೆ ಪ್ರತಿಭಾ ರಾಣಿ, ತನಿಖೆಯ ಯಥಾಸ್ಥಿತಿ ವರದಿ ಸಲ್ಲಿಸುವಂತೆ ಆದೇಶಿಸಿದರು.
   ಕನ್ಹಯ್ಯ ಬಗ್ಗೆ ದಿಲ್ಲಿ ಪೊಲೀಸರು ಈಗಾಗಲೇ ವರದಿಯೊಂದನ್ನು ನ್ಯಾಯಾಲಯಕ್ಕೆ ವರದಿಯೊಂದನ್ನು ಸಲ್ಲಿಸಿದ್ದಾರೆ. ವಿವಾದಿತ ಕಾರ್ಯಕ್ರಮದಲ್ಲಿ ಕನ್ಹಯ್ಯಾ ಕುಮಾರ್ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದನೆಂದು ವರದಿಯಲ್ಲಿ ಆರೋಪಿಸಲಾಗಿದೆ. ಖಾಸಗಿ ಟಿವಿ ವಾಹಿನಿಯೊಂದು ತೆಗೆದಿರುವ ವಿಡಿಯೋ ದೃಶ್ಯಾವಳಿಯ ಆಧಾರದಲ್ಲಿ ಪೊಲೀಸರು ಈ ಪ್ರಕರಣ ದಾಖಲಿಸಿದ್ದಾರೆಂದು ಸುದ್ದಿಸಂಸ್ಥೆಯೊಂದು ತಿಳಿಸಿದೆ.

ವರದಿಯಲ್ಲಿ ಕನ್ಹಯ್ಯ ವಿರುದ್ಧ ವಿವಾದಿತ ಕಾರ್ಯಕ್ರಮವನ್ನು ಸಾಂಸ್ಕೃತಿಕ ಕಾರ್ಯಕ್ರಮದ ಸೋಗಿನಲ್ಲಿ ನಡೆಸಿರುವುದು, ಅನುಮತಿ ರಹಿತವಾಗಿ ಬಲವಂತದಿಂದ ಕಾರ್ಯಕ್ರಮ ಏರ್ಪಡಿಸಿರುವುದು, ಜೆಎನ್‌ಯು ಕ್ಯಾಂಪಸ್‌ನಲ್ಲಿ ಕಾನೂನು ಮತ್ತು ಶಿಸ್ತಿನ ಸಮಸ್ಯೆಯನ್ನು ಸೃಷ್ಟಿ, ಹಾಗೂ ಸಂವಿಧಾನವಿರೋಧಿ ಘೋಷಣೆಗಳನ್ನು ಕೂಗಿದ ಆರೋಪಗಳನ್ನು ಹೊರಿಸಲಾಗಿದೆ ಇದಕ್ಕೂ ಮುನ್ನ, ಪ್ರಕರಣದ ವಿಚಾರಣೆಗೆ ಹಾಜರಾಗದಂತೆ, ದಿಲ್ಲಿಯ ಲೆ.ಗವರ್ನರ್ ನಜೀಬ್‌ಜಂಗ್ ಅವರು ದಿಲ್ಲಿ ಸರಕಾರದ ಸ್ಥಾಯಿ ನ್ಯಾಯವಾದಿ ರಾಹುಲ್ ಮೆಹ್ತಾಗೆ ಸೂಚಿಸಿದ್ದರು. ಈ ಪ್ರಕರಣದಲ್ಲಿ ದಿಲ್ಲಿ ಪೊಲೀಸರ ಮುಂದೆ ಹಾಜರಾಗಲು ಅವರು ನಾಲ್ವರು ನ್ಯಾಯವಾದಿಗಳನ್ನು ನೇಮಿಸಿದ್ದರು.
 ಪ್ರಕರಣದ ಇತರ ಆರೋಪಿಗಳಾದ ಉಮರ್ ಖಾಲಿದ್, ಆನಂತ್ ಪ್ರಕಾಶ್ ನಾರಾಯಣ್, ಅಶುತೋಷ್ ಕುಮಾರ್, ರಾಮ ನಾಗಾ ಹಾಗೂ ಅನಿರ್ಬನ್ ಭಟ್ಟಾಚಾರ್ಯ ಕೂಡಾ ನ್ಯಾಯಾಲಯವನ್ನು ಸಂಪರ್ಕಿಸಿ, ತಾವು ಪೊಲೀಸರಿಗೆ ಶರಣಾಗುವ ಮುನ್ನ ತಮಗೆ ಸಮರ್ಪಕ ಭದ್ರತೆಯನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ. ಅವರ ಅರ್ಜಿಯನ್ನು ಆಲಿಸಲು ಹೈಕೋರ್ಟ್ ಸಮ್ಮತಿಸಿದೆ.
 ಈ ಮಧ್ಯೆ ಉಮರ್‌ಖಾಲಿದ್ ಹಾಗೂ ಪ್ರಕರಣದ ಇತರ ಆರೋಪಿಗಳ ಬಂಧನಕ್ಕಾಗಿ ಜೆಎನ್‌ಯು ಕ್ಯಾಂಪಸ್‌ನೊಳಗೆ ಪ್ರವೇಶಿಸಲು ದಿಲ್ಲಿ ಪೊಲೀಸರಿಗೆ ಆದೇಶ ನೀಡುವಂತೆ ಕೋರಿ ಕಾನೂನು ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ಆಲಿಕೆಗೆ ದಿಲ್ಲಿ ಹೈಕೋರ್ಟ್ ಸಮ್ಮತಿಸಿದೆ.
ಕನ್ಹಯ್ಯ ಕುಮಾರ್ ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ ಜಾಮೀನು ಮನವಿಯಲ್ಲಿ, ತನ್ನ ವಿರುದ್ಧ ದೇಶದ್ರೋಹದ ಸುಳ್ಳು ಆರೋಪ ಹೊರಿಸಲಾಗಿದೆಯೆಂದು ತಿಳಿಸಿದ್ದಾರೆ ಹಾಗೂ ಜೆಎನ್‌ಯು ವಿವಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ತಾನು ಯಾವುದೇ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿಲ್ಲವೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News