ಸರಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಕೆ. ಎಂ. ಸಿ ಗೆ ಒಪ್ಪಿಸಲು ಮುಂದಾಗಿದೆಯೇ ರಾಜ್ಯ ಸರಕಾರ ?

Update: 2016-02-23 15:15 GMT

ಮಂಗಳೂರು , ಫೆ. 23 : ಇಲ್ಲಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಆಡಳಿತ ನಿರ್ವಹಣೆಯನ್ನು ಮೂವತ್ತು ವರ್ಷಗಳ ಕಾಲ ವಹಿಸಿಕೊಳ್ಳಲು ತಮಗೆ ಆಸಕ್ತಿಯಿದೆಯೆಂದು ಕಸ್ತೂರ್ಬ ಮೆಡಿಕಲ್ ಕಾಲೇಜು ಹಾಗು ಆಸ್ಪತ್ರೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. 

ಆದರೆ ಈ ಬಗ್ಗೆ ಸಾರ್ವಜನಿಕ ಹಾಗು ಆರೋಗ್ಯ ಕ್ಷೇತ್ರದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಸರಕಾರೀ ಸ್ವಾಮ್ಯದ ಆಸ್ಪತ್ರೆಯನ್ನು ಸಂಪೂರ್ಣವಾಗಿ ಖಾಸಗಿ ಮೆಡಿಕಲ್ ಕಾಲೇಜಿಗೆ ಬಿಟ್ಟು ಕೊಡಲು ಸರಕಾರ ಹಾಗು ಸಚಿವರು ಮುಂದಾಗಿದ್ದಾರೆ. ಅವರು ಖಾಸಗಿಯವರ ಹಿತಾಸಕ್ತಿಗೆ ಅನುಗುಣವಾಗಿ ಹೀಗೆ ಮಾಡುತ್ತಿದ್ದಾರೆ ಎಂಬ ಆರೋಪ ಜನರಿಂದ ಕೇಳಿ ಬಂದಿದೆ. ನಗರದ ಖ್ಯಾತ ವೈದ್ಯ , ಅಂಕಣಕಾರ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಈ ಕುರಿತ ದಿ ಹಿಂದೂ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ " ಸಚಿವರೇ ಆಸ್ಪತ್ರೆಯನ್ನು ಖಾಸಗಿಯವರಿಗೆ ಒಪ್ಪಿಸಲು ಮುಂದಾಗಿದ್ದಾರೆ. ಕರ್ನಾಟಕ ಸರಕಾರಕ್ಕೆ ಹೀಗೆ ಮಾಡಲು ನಾಚಿಕೆಯಾಗಬೇಕು " ಎಂದು ಪ್ರತಿಕ್ರಿಯಿಸಿದ್ದಾರೆ. 

1950 ರಿಂದಲೇ ವೆನ್ಲಾಕ್ ಆಸ್ಪತ್ರೆಯನ್ನು  ಕೆ ಎಂ ಸಿ ತನ್ನ ವೈದ್ಯ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ಅನುಭವಕ್ಕಾಗಿ ಬಳಸುತ್ತಿದೆ. ಜೊತೆಗೆ ವೆನ್ಲಾಕ್ ಗೆ ತಜ್ಞ ವೈದ್ಯರು ಹಾಗು ಪರೀಕ್ಷಾ ಸೌಲಭ್ಯಗಲನ್ನು ಕೆ ಎಂ ಸಿ ಒದಗಿಸುತ್ತಿದೆ. ಈಗ ಮತ್ತೆ ಮೂವತ್ತು ವರ್ಷಗಳ ಕಾಲ ಅದನ್ನು ತನ್ನ ಸುಪರ್ದಿಗೆ ನೀಡಲು ಕೆ ಎಂ ಸಿ ಕೇಳುತ್ತಿದೆ. 

ರಾಜ್ಯ ಸರಕಾರ ಮಂಗಳೂರಿನಲ್ಲಿ ಬಹು ನಿರೀಕ್ಷಿತ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿ ಅದರ ವಿದ್ಯಾರ್ಥಿಗಳಿಗೆ ವೆನ್ಲಾಕ್ ಅನ್ನು ಬಳಸಲು ಮುಂದಾಗಿರುವಾಗಲೇ ಕೆ ಎಂ ಸಿ ಈ ಪ್ರಸ್ತಾವ ಇಟ್ಟಿದೆ. ಈಗ ಕೆ ಎಂ ಸಿ ಕ್ಲಿನಿಕಲ್ ಶುಲ್ಕ ಎಂದು ಎರಡು ಕೋಟಿ ರೂಪಾಯಿಯನ್ನು ಸರಕಾರಕ್ಕೆ ನೀಡುತ್ತಿದೆ. ಇಲ್ಲಿನ ಸ್ವಚ್ಛತಾ ಹಾಗು ಸುರಕ್ಷತಾ ಸಿಬ್ಬಂದಿಯ ವೇತನವನ್ನೂ ಕೆ ಎಂ ಸಿ ಯೇ ನೋಡಿಕೊಳ್ಳುತ್ತಿದೆ. ಕೆ ಎಂ ಸಿ ಗೆ ಈಗಾಗಲೇ ಅಂಬೇಡ್ಕರ್ ( ಜ್ಯೋತಿ ) ವೃತ್ತ ಹಾಗು ಅತ್ತಾವರದಲ್ಲಿ ಆಸ್ಪತ್ರೆಗಳಿವೆ. 

ಜೂನ್ 2014 ರಲ್ಲಿ ಆರೋಗ್ಯ ಸಚಿವ ಯು ಟಿ ಖಾದರ್ ಅವರು ನಗರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಪ್ರಸ್ತಾವ ಮಂಡಿಸಿದ್ದರು . ಆಗ ಕೆ ಎಂ ಸಿ ಗೆ ವೆನ್ಲಾಕ್ ಅನ್ನು ಬಿಡಲು ಸಮಯಾವಕಾಶ ನೀಡಬೇಕೆಂದು ಅವರು ಹೇಳಿದ್ದರು. 

"ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ವೆನ್ಲಾಕ್ ಆರೋಗ್ಯ ರಕ್ಷಾ ಸಮಿತಿಗೆ ಕೆ ಎಂ ಸಿ ಪ್ರಸ್ತಾವ ಸಲ್ಲಿಸಿದೆ. ಆ ಸಮಿತಿ ಅದನ್ನು ಪರಿಶೀಲಿಸಿ ನಮ್ಮ ಇಲಾಖೆಗೆ ಸಲ್ಲಿಸಲಿದೆ"  ಎಂದು ಸಚಿವ ಖಾದರ್ ದಿ ಹಿಂದೂ ಪತ್ರಿಕೆಗೆ ತಿಳಿಸಿದ್ದಾರೆ. 

" ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಕೆ ಎಂ ಸಿ ಚಿಕಿತ್ಸಾ ವ್ಯವಸ್ಥೆ ಮಾಡಬೇಕು " ಎಂದು ನಾವು ಷರತ್ತು ವಿಧಿಸುವ ಬಗ್ಗೆ ಚಿಂತಿಸುತ್ತಿದ್ದೇವೆ. " ನಮಗೆ ಆಸ್ಪತ್ರೆಯ ಆಡಳಿತ ನಿಯಂತ್ರಣ ಬಿಟ್ಟು ಕೊಡುವ ಇರಾದೆಯಿಲ್ಲ " ಎಂದೂ ಖಾದರ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News