ಭಾರತ ಒದಗಿಸುತ್ತಿರುವ ಆರ್ಥಿಕ ಅವಕಾಶಗಳಿಗಾಗಿ ಅಂತರರಾಷ್ಟ್ರೀಯ ಸಮುದಾಯ ಮೌನವಾಗಿದೆಯೆ?

Update: 2016-02-24 05:34 GMT

ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿರುವ ವಿವಾದದ ನಡುವೆ, ಮತ್ತು ತದನಂತರ ಆಗಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ಬಂಧನದ ಬಳಿಕ ಫ್ರೆಂಚ್ ದಿನಪತ್ರಿಕೆ ಲೆ ಮಾಂಡೆ ಈಗ ತನ್ನ ಸಂಪಾದಕೀಯದಲ್ಲಿ ಈ ವಿಷಯವಾಗಿ ಮಾನವ ಹಕ್ಕು ಕಾಳಜಿಯನ್ನು ಭಾರತ ಸರ್ಕಾರದ ಮುಂದೆ ವ್ಯಕ್ತಪಡಿಸುವಂತೆ ಫ್ರೆಂಚ್ ಸರ್ಕಾರವನ್ನು ಕೋರಿದೆ.

ದೆಹಲಿಯಲ್ಲಿ ದೇಶದ್ರೋಹಿ ಆರೋಪದಲ್ಲಿ ಜೆಎನ್‌ಯು ವಿದ್ಯಾರ್ಥಿ ಮತ್ತು ಒಬ್ಬ ಮಾಜಿ ಪ್ರೊಫೆಸರ್ ಬಂಧನವು ಹಿಂದೂ ರಾಷ್ಟ್ರವಾದಿ ಸರ್ಕಾರದ ಸರ್ವಾಧಿಕಾರದ ಕಡೆಗಿನ ವಾಲುವಿಕೆಯ ಇತ್ತೀಚೆಗಿನ ಉದಾಹರಣೆಯಾಗಿದೆ. ಈ ಬಂಧನಗಳಿಗೆ ಕಾರಣ ಸ್ಪಷ್ಟವಾಗದೆ ಇದ್ದರೂ ದೇಶದಾದ್ಯಂತ ವಿದ್ಯಾರ್ಥಿಗಳು ಅನೇಕ ಪ್ರತಿಭಟನೆಗಳನ್ನು ಆಯೋಜಿಸಿದ್ದಾರೆ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ. ಭಾರತದಲ್ಲಿ ಮೋದಿಯ ಚಿಂತೆಗೀಡುಮಾಡುವ ರಾಷ್ಟ್ರವಾದ ಎನ್ನುವ ತಲೆಬರಹದಲ್ಲಿ ಪ್ರಕಟವಾದ ಸಂಪಾದಕೀಯವು ಹಿಂದೂ ರಾಷ್ಟ್ರವಾದಿಗಳು ಭಾರತೀಯ ಧ್ವಜವನ್ನು ಸಮರ್ಥಿಸುತ್ತಿರುವುದರಲ್ಲಿ ವಿರೋಧಾಭಾಸವಿದೆ ಎಂದು ವಿವರಿಸಿದೆ. ಹೀಗೆ ರಾಷ್ಟ್ರದ ಸಮರ್ಥಕರಾಗಿ ಬಂದಿರುವ ವ್ಯಕ್ತಿಗಳು ಅಥವಾ ಸಂಘಟನೆಗಳ ಪ್ರಯತ್ನವು ಕುತೂಹಲಕರವಾಗಿದ್ದು, ಅವರು ಸ್ವಾತಂತ್ರ್ಯಾನಂತರ ಭಾರತದ ಪ್ರಜಾಸತ್ತೆಯ ಒಂದು ಸ್ತಂಭವಾಗಿರು ಜಾತ್ಯತೀತತೆಯನ್ನು ಧಮನಿಸುತ್ತಲೇ ಮುಂದುವರಿದವರು ಎಂದು ಹೇಳಿರುವ ಸಂಪಾದಕೀಯ, ಇಷ್ಟಕ್ಕೆ ನಿಲ್ಲದೆ ವಿದ್ಯಾರ್ಥಿ ಮತ್ತು ಪ್ರೊಫೆಸರ್ ಬಂಧಿಸಲು ಬಳಸಿದ ಅದೇ ವಸಾಹತುಶಾಹಿ ಕಾಯ್ದೆಯಡಿ ಮಹಾತ್ಮಾ ಗಾಂಧಿ ಕೂಡ ಜೈಲು ಸೇರಿದ್ದರು ಎನ್ನುವುದು ವಿಚಿತ್ರ ಎಂದು ವಿಶ್ಲೇಷಿಸಿದೆ.

ದೇಶದ ವಾಕ್ ಸ್ವಾತಂತ್ರ್ಯವು ಅಶೋಕನ ಕಾಲದಲ್ಲಿಯೇ ಭಾರತದ ಶ್ರೀಮಂತ ಪರಂಪರೆಯಾಗಿತ್ತು ಎಂದು ಹೇಳಿರುವ ಸಂಪಾದಕೀಯ, ಇಂದಿನ ಭಾರತದಲ್ಲಿ ಅದು ಕೈಗೆಟುಕದ ವಸ್ತುವಾಗಿದೆ ಎಂದಿದೆ. ಮೋದಿ ಸರ್ಕಾರವು ಪರಿಸರಕ್ಕಾಗಿ ಹೋರಾಡುತಿರುವ ಸರ್ಕಾರೇತರ ಸಂಘಟನೆಗಳು ಮತ್ತು ಸಂಸ್ಥೆಗಳನ್ನೂ ಗುರಿ ಮಾಡುತ್ತಿರುವ ಬಗ್ಗೆಯೂ ಸಂಪಾದಕೀಯ ಆಕ್ಷೇಪ ವ್ಯಕ್ತಪಡಿಸಿದೆ. ಫ್ರೆಂಚ್ ಸರ್ಕಾರವು ಇಂತಹ ಕಾಳಜಿಗಳನ್ನು ಅಲಕ್ಷಿಸುತ್ತಿದೆ ಮತ್ತು ಜಗತ್ತಿನಲ್ಲಿ ಅತೀ ಹೆಚ್ಚು ಪ್ರಗತಿ ದರವಿರುವ ದೇಶಗಳಲ್ಲಿ ಒಂದಾಗಿರುವ ಭಾರತ ಒದಗಿಸುತ್ತಿರುವ ಆರ್ಥಿಕ ಅವಕಾಶಗಳು ಅಂತರರಾಷ್ಟ್ರೀಯ ಸಮುದಾಯ ಇಂತಹ ವಿಷಯಗಳಲ್ಲಿ ಮೌನವಾಗಿರುವಂತೆ ಮಾಡಿದೆ ಎಂದೂ ಆರೋಪಿಸಿರುವ ಸಂಪಾದಕೀಯ, ಫ್ರಾನ್ಸ್ ಕೇವಲ ಭಾರತದಿಂದ ದೊರೆಯುವ ಆರ್ಥಿಕ ರಾಜತಾಂತ್ರಿಕತೆಯ ಕಡೆಗೆ ಮಾತ್ರ ಗಮನಹರಿಸಿದೆ. ಆದರೆ ವ್ಯಾಪಾರಿ ಸಂಬಂಧಗಳು ಮಾನವ ಹಕ್ಕುಗಳ ವಿಷಯದಲ್ಲಿ ಧ್ವನಿ ಎತ್ತುವುದನ್ನು ತಡೆಯುವುದಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News