ಅಮೆರಿಕ: ಮಗಳ ಮದುವೆಗೆ ಹೋದ ಹೈದ್ರಾಬಾದ್ ಮೂಲದ ವ್ಯಕ್ತಿ ಅಸಹಜ ಸಾವು
ಲಾಸ್ ಎಂಜಲೀಸ್: ಮಗಳ ಮದುವೆಯ ಆರತಕ್ಷತೆ ಸಂದರ್ಭದಲ್ಲಿ ಮದುವೆ ಹಾಲ್‌ನಿಂದ ಹೊರ ನಡೆದಿದ್ದ ಭಾರತೀಯ ಮೂಲದ ಪ್ರಸಾದ್ ಮೊಪಾತ್ರಿ ಎಂಬವರ ಶವ ಹತ್ತು ದಿನಗಳ ಬಳಿಕ ನೀರಿನ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ಇಲ್ಲಿನ ಸೆಕ್ರೆಮೆಂಟೊ ಕೌಂಟಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಮೊಪಾತ್ರಿಯವರ ಶವ ಸೋಮವಾರ ಮದುವೆ ಹಾಲ್‌ನಿಂದ ಸುಮಾರು 8 ಕಿಲೋಮೀಟರ್ ಕೆಳಭಾಗದ ಜಲಮಾರ್ಗದಲ್ಲಿ ಪತ್ತೆಯಾಗಿದೆ. ಫೆಬ್ರವರಿ 13ರಂದು ಅವರು ಮಗಳ ಮದುವೆ ಸಂದರ್ಭದಲ್ಲಿ ಹಾಲ್‌ನಿಂದ ನಾಪತ್ತೆಯಾಗಿದ್ದರು. ದೇಹದಲ್ಲಿ ಯಾವುದೇ ಹಲ್ಲೆ ಅಥವಾ ಇತರ ದಾಳಿ ನಡೆದ ಗುರುತು ಇಲ್ಲ. ಅದಾಗ್ಯೂ ಸಾವಿನ ಕಾರಣ ಕಂಡುಹಿಡಿಯಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜಲಮಾರ್ಗದ ದೋಣಿ ಸಿಬ್ಬಂದಿಗೆ ಶವ ಕಂಡ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಸಿಬ್ಬಂದಿ ಈ ಶವವನ್ನು ನೀರಿನಿಂದ ಹೊರತೆಗೆದರು.
ಮಗಳ ಮದುವೆಗಾಗಿ ಹೈದ್ರಾಬಾದ್‌ನಿಂದ ಲಾಸ್‌ಎಂಜಲೀಸ್‌ಗೆ ತೆರಳಿದ್ದ ಮೊಪಾತ್ರಿ ಫೆಬ್ರವರಿ 13ರಂದು ಗ್ರಾಂಡ್ ಐಲೆಂಡ್ ಮ್ಯಾನ್ಸನ್‌ನಿಂದ ನಾಪತ್ತೆಯಾಗಿದ್ದರು. ಇವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ಹೇಳಿವೆ.