ವಿದ್ಯುತ್ ಆಘಾತದಿಂದ ಮೃತ ಮಂಜೇಶ್ವರದ ಯುವಕನ ಅಂಗಾಂಗ ದಾನ
ಮಂಗಳೂರು, ಫೆ.25: ವಿದ್ಯುತ್ ಆಘಾತಕ್ಕೊಳಗಾಗಿ ಕಟ್ಟಡದಿಂದ ಬಿದ್ದ ಪರಿಣಾಮ ಮೆದುಳು ನಿಷ್ಕ್ರಿಯಗೊಂಡಿದ್ದ ಮಂಜೇಶ್ವರದ ವಿನೀತ್‌ರಾಜ್ ಎಂಬ 19 ವರ್ಷದ ಯುವಕನ ಅಂಗಾಂಗ ದಾನ ಮಾಡಿದ ಪೋಷಕರು. ಬೆಂಗಳೂರಿನಿಂದ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಆಗಮಿಸಿದ ವೈದ್ಯರ ತಂಡವು ವಿನೀತ್‌ರಾಜ್‌ರ ಯಕೃತ್‌ನ್ನು ಇಂದು ಬೆಳಗ್ಗೆ ಬೆಂಗಳೂರಿಗೆ ಕೊಂಡೊಯ್ಯಿತು. ಇದಕ್ಕಾಗಿ ಎ.ಜೆ. ಆಸ್ಪತ್ರೆಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮಂಜೇಶ್ವರ ನಿವಾಸಿ ಕೃಷ್ಣ ಮೂಲ್ಯ ಹಾಗು ಗೀತಾ ದಂಪತಿಯ ಹಿರಿಯ ಮಗನಾಗಿದ್ದ ವಿನೀತ್‌ರಾಜ್ ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್ ಆಗಿದ್ದರು. ಇವರು ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಆಘಾತಕ್ಕೊಳಗಾಗಿ ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ಬಳಿಕ ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ ವಿನೀತ್‌ರ ಹೆತ್ತವರು ಆತನ ಅಂಗಾಂಗ ದಾನಕ್ಕೆ ಮುಂದಾದರು.ವಿನೀತ್‌ರಾಜ್‌ರ ಹೃದಯ, ಕಾರ್ನಿಯಾ, ಕಿಡ್ನಿ ಸೇರಿದಂತೆ ಅಂಗಾಂಗ ದಾನಕ್ಕೆ ಮುಂದಾಗಿರುವುದಾಗಿ ಕೃಷ್ಣಮೂಲ್ಯ ದಂಪತಿ ವೈದ್ಯರಲ್ಲಿ ತಿಳಿಸಿದರು. ಅದರಂತೆ ಬೆಂಗಳೂರಿನಿಂದ ವಿಶೇಷ ತಜ್ಞ ವೈದ್ಯರ ತಂಡ ವಿನೀತ್‌ರ ಅಂಗಾಂಗಗಳ ಪೈಕಿ ಯಕೃತ್ತನ್ನು ಇಂದು ಮುಂಜಾನೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಸಾಗಿಸಿತು. ಇದಕ್ಕೆ ಮಂಗಳೂರು ನಗರ ಪೊಲೀಸರು ಸಹಕರಿಸಿದ್ದು, ನಗರದ ಎ.ಜೆ. ಆಸ್ಪತ್ರೆಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಕೊಂಡೊಯ್ಯಲಾಯಿತು.