ಹಿರಿಯ ನಾಗರಿಕರ ಕೆನ್ನೆಗೆ ಬಾರಿಸಿದ ಡಿಐಜಿ ಅಮಾನತು!
ಲಕ್ನೊ: ಹಿರಿಯ ನಾಗರಿಕರೊಬ್ಬರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಲಕ್ನೋದ ಪೊಲೀಸ್ ಉಪಮಹಾನಿರ್ದೇಶಕ ಡಿ.ಕೆ.ಚೌಧರಿಯವರನ್ನು ಉತ್ತರ ಪ್ರದೇಶ ಸರಕಾರವು ಅಮಾನತುಗೊಳಿಸಿದೆ.
ರಾಜ್ಯದ ಗೃಹ ವಿಭಾಗದ ಪ್ರಮುಖ ಕಾರ್ಯದರ್ಶಿ ದೇವಾಶೀಷ್ ಪಾಂಡ್ಯ ಇದನ್ನು ದೃಢೀಕರಿಸಿದ್ದು, ಚೌಧರಿ ಲಕ್ನೋದ ಇಂದಿರಾ ನಗರದ ಭೂತನಾಥ್ ಮಾರ್ಕೆಟ್‌ನಲ್ಲಿ ಓರ್ವ ಹಿರಿಯ ವ್ಯಕ್ತಿಗೆ ಹೊಡೆದ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಹಿರಿಯ ವ್ಯಕ್ತಿಗೆ ಥಳಿಸಿದ ಬಗ್ಗೆ ಮಾಧ್ಯಮದಲ್ಲಿ ಬಂದ ವರದಿಯನ್ನಾಧಾರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಅವರಿಗಿನ್ನೂ ಆರೋಪ ಪತ್ರ ನೀಡಿಲ್ಲ ಎಂದು ಪಾಂಡ್ಯ ತಿಳಿಸಿದ್ದಾರೆ.
ಇದಕ್ಕೂ ಮೊದಲು ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಪುಟ್‌ಪಾತ್‌ನಲ್ಲಿ ಅರ್ಜಿಗಳನ್ನು ಟೈಪ್ ಮಾಡುವ ಬದುಕುತ್ತಿದ್ದ ಹಿರಿಯ ನಾಗರಿಕರೊಬ್ಬರನ್ನು ಥಳಿಸಿ ಕಾಲಿಗೆ ಗಾಯಗೊಳಿಸಿದ್ದ. ಈ ಸುದ್ದಿ ವರದಿಯಾಗುತ್ತಿದ್ದಂತೆ ಪೊಲೀಸ್ ಇನ್ಸ್‌ಪೆಕ್ಟರ್‌ರನ್ನು ಉತ್ತರ ಪ್ರದೇಶ ಸರಕಾರ ಅಮಾನತುಗೊಳಿಸಿತ್ತು. ಅಲ್ಲದೆ ಹಾನಿಗೀಡಾಗಿದ್ದ ಅವರ ಟೈಪ್‌ರೈಟರ್ ದುರಸ್ತಿಗೆ ಸರಕಾರ ನೆರವು ನೀಡಿತ್ತು. ಹಲ್ಲೆಗೊಳಗಾದ ಹಿರಿಯ ನಾಗರಿಕರು ಕ್ಷಮಿಸಿದ ಬಳಿಕವೇ ಇನ್ಸ್‌ಪೆಕ್ಟರ್‌ನ ಅಮಾನತನ್ನು ಸರಕಾರ ಹಿಂಪಡೆದಿತ್ತು.