ರಿವಾಲ್ವರ್ ಕಿತ್ತುಕೊಂಡು ಇನ್ಸ್‌ಪೆಕ್ಟರ್‌ರನ್ನೇ ಗುಂಡಿಟ್ಟು ಕೊಂದ ಮಾನಸಿಕ ಅಸ್ವಸ್ಥ
ಪಿಲಿಬಿತ್: ಮಾನಸಿಕ ಅಸ್ವಸ್ಥನೊಬ್ಬ ಪೊಲೀಸ್ ಇನ್‌ಸ್ಪೆಕ್ಟರ್‌ರ ರಿವಾಲ್ವರ್‌ರನ್ನು ಕಿತ್ತುಕೊಂಡು ಇನ್‌ಸ್ಪೆಕ್ಟರ್‌ನನ್ನೇ ಗುಂಡು ಹಾರಿಸಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಪಿಲಿಬಿತ್‌ನ ಪೂರನ್‌ಪುರದ ಕೋತ್‌ವಾಲ್‌ನಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಇನ್ನಿಬ್ಬರು ಗಂಭೀರ ಗಾಯಗೊಂಡಿರುವುದು ವರದಿಯಾಗಿದೆ.
ಸುಭಾಶ್ ಯಾದವ್(58) ಕೊಲೆಗೀಡಾದ ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್. ಫಾರೂಕ್‌ಬಾದ್‌ನ ನಿವಾಸಿಯಾಗಿದ್ದ ಸುಭಾಷ್ ಯಾದವ್ ಇಂದು ತನ್ನ ವಾಹನದಲ್ಲಿ ತೆರಳುತ್ತಿದ್ದ ವೇಳೆ ಮಾನಸಿಕ ಅಸ್ವಸ್ಥ ರಾಜೇಂದ್ರ ಎಂಬಾತ ಅವರ ವಾಹನದತ್ತ ಕಲ್ಲೆಸೆದಿದ್ದಾನೆ. ಈ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ವಾಹನದಿಂದ ಇಳಿದು ಅವನನ್ನು ರಸ್ತೆಯಿಂದ ದೂರ ಸರಿಸಲು ಪ್ರಯತ್ನಿಸುತ್ತಿದ್ದಾಗ ಪಿಸ್ತೂಲನ್ನು ಕಿತ್ತುಕೊಂಡು ಆತ ಗುಂಡು ಹಾರಿಸಿದ್ದಾನೆ. ಈ ವೇಳೆ ಒಂದು ಗುಂಡು ಇನ್‌ಸ್ಪೆಪೆಕ್ಟರ್‌ರ ತಲೆಯನ್ನು ಛಿದ್ರಗೊಳಿಸಿದೆ. ಇದೇವೇಳೆ ಆ ದಾರಿಯಾಗಿ ನಡೆದುಕೊಂಡು ಹೋಗುತ್ತಿದ್ದ ಹೊಟೇಲ್ ಕಾರ್ಮಿಕರಿಬ್ಬರಾದ ತಾರಾಚಂದ್(18)ಮತ್ತು ರವಿ(19) ಎಂಬವರಿಗೂ ರಾಜೇಂದ್ರ ಗುಂಡು ಹಾರಿಸಿದ್ದಾನೆ. ಇದರಿಂದ ಅವರಿಬ್ಬರು ಗಾಯಗೊಂಡಿದ್ದು, ಅವರನ್ನು ರುಹೆಲ್‌ಖಂಡದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿ ಮಾನಸಿಕ ಅಸ್ವಸ್ಥನನ್ನು ಪೊಲೀಸರು ಬಂಧಿಸಿದ್ದಾರೆ.