×
Ad

ಸುಳ್ಯದಲ್ಲಿ ಕಾನ, ಬಾಣೆ, ಕುಮ್ಕಿ ಹೋರಾಟ ಸಮಿತಿ ಸಭೆ, ಗ್ರಾಮ ಮಟ್ಟದಲ್ಲೂ ಸಮಿತಿ ರಚನೆಗೆ ನಿರ್ಧಾರ

Update: 2016-02-25 17:19 IST

ಸುಳ್ಯ: ಕಾನ, ಬಾಣೆ, ಕುಮ್ಕಿ ಹೋರಾಟ ಸಮಿತಿ ಪೂರ್ವಭಾವಿ ಸಭೆ ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.
ಹೋರಾಟ ಸಮಿತಿ ಅಧ್ಯಕ್ಷ ಪಿ.ಆರ್.ಯಶೋಚಂದ್ರ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಎನ್.ಜಿ.ಪ್ರಭಾಕರ ರೈ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ನೆಟ್ಟಾರು, ಪುತ್ತೂರು ಸಮಿತಿಯ ಸುಬ್ರಾಯ, ವಸಂತ ಭಟ್ ತೊಡಿಕಾನ, ಪ್ರವೀಣ್ ಮುಂಡೋಡಿ ವೇದಿಕೆಯಲ್ಲಿದ್ದರು.
ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ ಮಾಡುವುದು ಎಂದು ನಿರ್ಧರಿಸಲಾಯಿತು. ಕಾನ, ಬಾಣೆ, ಕುಮ್ಕಿ ಹಕ್ಕು ಇರುವ ರೈತರು ತಮ್ಮ ಜಮೀನಿನ ದಾಖಲೆಗಳನ್ನು ಸಂಗ್ರಹಿಸುವುದು ಮತ್ತು ಹೋರಾಟ ಸಮಿತಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ವಸಂತ ಭಟ್ ಹೇಳಿದರು.

ತಾಲೂಕಿನಲ್ಲಿ ಕಾನ, ಬಾಣೆ, ಕುಮ್ಕಿ ಜಮೀನು ಹೊಂದಿರುವವ ರೈತರ ಪಟ್ಟ ತಯಾರಿಸಿ ಗ್ರಾಮ ಮಟ್ಟದಲ್ಲಿ ಅವರನ್ನು ಒಟ್ಟು ಸೇರಿಸುವುದು. ಬಳಿಕ ಗ್ರಾಮ ಸಮಿತಿ ರಚನೆ ಮಾಡುವುದು, ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಮತ್ತು ಕಾನೂನು ಹೋರಾಟಕ್ಕೆ ಆರ್ಥಿಕ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡುವುದೆಂದು ನಿರ್ಧರಿಸಲಾಯಿತು. 

ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿ ಮೂರು ತಿಂಗಳು ಕಳೆದರೂ ಇನ್ನೂ ಭೂಪರಿವರ್ತನೆ ಆಗಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ರೈತರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ‘ಮಿಲ್ಕ್ ಮಾಸ್ಟರ್’ ರೈತ ರಾಘವ ಗೌಡ ದೂರಿದ್ದಾರೆ. ಸುಳ್ಯದಲ್ಲಿ ನಡೆದ ಕುಮ್ಕಿ ಹೋರಾಟ ಸಮಿತಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ತನ್ನ ಸಂಕಷ್ಟ ತೋಡಿಕೊಂಡರು. ಸಣ್ಣ ಉದ್ದಿಮೆ ಆರಂಭಿಸಿ 30 ಜನರಿಗೆ ಪೂರ್ಣಕಾಲಿಕ ಉದ್ಯೋಗ ನೀಡಿದ್ದೇನೆ. ವಾರ್ಷಿಕ 12 ಲಕ್ಷ ರೂಪಾಯಿ ಸರ್ಕಾರಕ್ಕೆ ತೆರಿಗೆಯನ್ನೂ ಪಾವತಿಸುತ್ತಿದ್ದೇನೆ. ಉದ್ದಿಮೆ ವಿಸ್ತರಿಸಲು ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳು ಕಳೆದಿದೆ. ಕಂದಾಯ ನಿರೀಕ್ಷರು ವರದಿ ಸಲ್ಲಿಸಿದ್ದರೂ, ಇನ್ನೂ ಭೂಪರಿವರ್ತನೆ ಆಗಿಲ್ಲ. ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ ತನ್ನನ್ನು ಯಾರವ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ. 50 ಸಾವಿರ ಲಂಚದ ಬೇಡಿಕೆ ಇಟ್ಟಿದ್ದಾರೆ. ನಾನು ಲಂಚ ನೀಡಿ ಕೆಲಸ ಮಾಡಿಸುವುದಿಲ್ಲ ಎಂದವರು ಹೇಳಿದರು. ಸಂಕಷ್ಟದಲ್ಲಿರುವ ರೈತರನ್ನು ಮೇಲೆತ್ತುವ ಬದಲು ತುಳಿಯುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News