×
Ad

ಮನಪಾ ವಿಶೇಷ ಸಭೆಯ ಕಾಮಗಾರಿಗಳ ಬಗ್ಗೆ ಲೋಕಾಯುಕ್ತ ದೂರು: ವಿಪಕ್ಷ

Update: 2016-02-25 17:31 IST

ಮಂಗಳೂರು, ಫೆ. 25: ಮಹಾನಗರ ಪಾಲಿಕೆಯ ಫೆ. 24ರ ವಿಶೇಷ ಸಭೆ ಅಸಿಂಧುವಾಗಿದ್ದು, ಅಲ್ಲಿ ಕೈಗೊಂಡ 19 ಕೋಟಿ ರೂ.ಗಳು ಭ್ರಷ್ಟಾಚಾರದ ಮುನ್ಸೂಚನೆಯನು ನೀಡುತ್ತಿರುವುದರಿಂದ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಪಾಲಿಕೆಯ ವಿಪಕ್ಷ ನಾಯಕ ಬಿಜೆಪಿಯ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.

ಮನಪಾದ ವಿಪಕ್ಷ ನಾಯಕರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 19 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ವಿವಿಧ ಕಾಮಗಾರಿಗಳಿಗೆ ಪೂರ್ವಾನುಮೋದನೆ ನೀಡಲು ಮೇಯರ್‌ಗೆ ಅಧಿಕಾರವಿಲ್ಲ ಎಂದರು.

ಅಧಿಕಾರಿಗಳು ನೀಡುವ ಕಾನೂನುಬಾಹಿರ ಸಲಹೆ ಹಾಗೂ ಶಿಫಾರಸುಗಳ ಕುರಿತು ಮೇಯರ್ ಯಾವುದೇ ವಿಮರ್ಶೆ ಮಾಡದೆ ರಬ್ಬರ್ ಸ್ಟಾಂಪ್‌ನಂತೆ ಒಪ್ಪಿಗೆ ನೀಡಿ ಕೆಲಸ ಮಾಡುತ್ತಿರುವುದು ವಿಷಾದನೀಯ. ಈ ಬಗ್ಗೆ ವಿಭಾಗೀಯ ಆಯುಕ್ತರಿಂದ ಉನ್ನತ ಮಟ್ಟದ ಆಡಳಿತಾತ್ಮಕ ತನಿಖೆ ನಡೆಸಲು ಕೂಡಾ ತಾವು ಒತ್ತಾಯಿಸುವುದಾಗಿ ಹೇಳಿದರು.

ಯಾವುದೇ ವಿಶೇಷ ಅಜೆಂಡಾ ಇಲ್ಲದೆ ಕರೆಯಲಾದ ವಿಶೇಷ ಸಭೆ ಕಾನೂನು ಪ್ರಕಾರ ಸಿಂಧುವಾಗುವುದಿಲ್ಲ. ವಿಶೇಷ ಸಭೆಯನ್ನು ವಿಶೇಷ ಅಥವಾ ತುರ್ತು ಅಥವಾ ಅಸಾಮಾನ್ಯ ಹಾಗೂ ಮಹತ್ವದ ವಿಷಯದ ಕುರಿತು ಮಾತ್ರ ಚರ್ಚಿಸಬಹುದಾಗಿದೆ. ಈ ರೀತಿಯ ಸಭೆಯನ್ನು ಕರೆಯಲು ಮೂರನೆ ಒಂದು ಸದಸ್ಯರು ವಿಶೇಷ ವಿಷಯಗಳನ್ನು ಕಾರಣ ಸಹಿತ ನಮೂದಿಸಿ ಲಿಖಿತ ರೂಪದಲ್ಲಿ ವಿನಂತಿ ಸಲ್ಲಿಸಬೇಕು. ಇದು ಎರಡು ಸಾಮಾನ್ಯ ಸಭೆಗಳ ನಡುವೆ ವಿಶೇಷ ಸಂದರ್ಭದಲ್ಲಿ ತುರ್ತು ತೀರ್ಮಾನ ಅಥವಾ ನಿರ್ಣಯ ಕೈಗೊಳ್ಳಲು ಮಾತರ ಕರೆಯಬಹುದಾಗಿದೆ. ಕೆಲವು ವಿಚಾರಗಳ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಾರದಂತೆ ತಡೆಯುವ ಸಲುವಾಗಿ ವಿಶೇಷ ಸಭೆ ನಡೆಸುವ ಅವಕಾಶವನ್ನು ದುರ್ಬಳಕೆ ಮಾಡಲು ಅವಕಾಶವಿಲ್ಲ. ಸ್ಥಳೀಯ ಆಡಳಿತ ಪಕ್ಷದ ಶಾಸಕರ ಕಾಮಗಾರಿ ಕುರಿತ ರಾಜಕೀಯ ಉದ್ದೇಶವನ್ನು ಈಡೇರಿಸಲು ಈ ರೀತಿಯಾಗಿ ಹಿಂಬಾಗಿಲ ಮಾರ್ಗ ನೀತಿ ಅನುಸರಿಸಲಾಗಿದೆ ಎಂದು ಅವರು ದೂರಿದರು.

ಸಾಮಾನ್ಯ ಸಭೆಯ ಅಜೆಂಡಾವನ್ನು ವಿಶೇಷ ಎಂಬುದಾಗಿ ಬಿಂಬಿಸುವ ಪ್ರಯತ್ನ ನಡೆಸಲಾಗಿದೆ. ಆಯುಕ್ತರು ಇಲ್ಲದ ಕಾರಣ ಸಾಮಾನ್ಯ ಸಭೆ ಕರೆಯಲಾಗಿಲ್ಲ ಎಂದು ಮೇಯರ್ ಹಾರಿಕೆಯ ಉತ್ತರ ನೀಡಿದ್ದಾರೆ. ಆಯುಕ್ತರು ಇಲ್ಲದಿರುವಾಗ ಅವರ ಸ್ಥಾನದಲ್ಲಿದ್ದ ಜಂಟಿ ಆಯುಕ್ತರ ಮೂಲಕ ಸಭೆ ನಡೆಸಲು ಮೇಯರ್ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಹಾಗೆ ಮಾಡದೆ ಏನೂ ವಿಶೇಷವೇ ಇಲ್ಲದ ನಿರ್ಣಯಗಳನ್ನು ತರಾತುರಿಯಲ್ಲಿ ಅನುಮೋದಿಸುವ ಮೂಲಕ ಕಾನೂನುಬಾಹಿರವಾಗಿ ನಡೆದುಕೊಳ್ಳಲಾಗಿದೆ. ಸಭೆಯಲ್ಲಿ ಕೈಗೊಂಡಿದೆ ಎನ್ನಲಾದ ನಿರ್ಣಯಗಳನ್ನು ಜಾರಿಗೊಳಿಸಿದದಲ್ಲಿ ಅವುಗಳು ಅಕ್ರಮ ಕಾಮಗಾರಿಗಳಾಗಲಿವೆ. ಇದರಲ್ಲಿ ಭಾಗಿಯಾಗುವ ಅಧಿಕಾರಿಗಳು ಕೂಡಾ ಅನುಮೋದಿತ ಕಾಮಗಾರಿ ಯೋಜನೆಗಳನ್ನು ಜಾರಿಗೊಳಿಸಿದಲ್ಲಿ ಅವರನ್ನೂ ಹೊಣೆಯನ್ನಾಗಿಸಲಾಗುವುದು. ಈಬಗ್ಗೆ ಈಗಾಗಲೇ ಈ ಆಯುಕ್ತರ ಗಮನಕ್ಕೆ ತರಲಾಗಿದೆ. ರಾಜ್ಯ ನಗರಾಭಿವೃದ್ದಿ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ಸದ್ಯದಲ್ಲಿಯೇ ದೂರು ಸಲ್ಲಿಸಲಾಗುವುದು. ನಿರ್ಣಯವನ್ನು ವಜಾಗೊಳಿಸುವಂತೆ ಸರಕಾರಕ್ಕೂ ಪತ್ರ ಬರೆಯಲಾಗುವುದು ಎಂದು ಸುಧೀರ್ ಶೆಟ್ಟಿ ಹೇಳಿದರು.

ಕಾನೂನು ಬಾಹಿರವಾಗಿ ಸದನದ ನಡಾವಳಿ ನಡೆಸಿದ ಮೇಯರ್ ಮತ್ತು ಪಾಲಿಕೆಯ ಮುಖ್ಯ ಸಚೇತಕರನ್ನು ಅವರ ಸ್ಥಾನದಿಂದ ವಜಾಗೊಳಿಸಿ ಅವರ ಪಾಲಿಕಾ ಸದಸ್ಯತ್ವ ರದ್ದು ಗೊಳಿಸಲು ರಾಜ್ಯ ಸರಕಾರವನ್ನು ಕೋರಲಾಗುವುದು. ತಪ್ಪಿದಲ್ಲಿ ಕಾನೂನು ಕ್ರಮ ಜರಗಿಸಲು ವಕೀಲರ ಮೂಲಕ ನೋಟೀಸು ನೀಡಲಾಗುವುದು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಪ್ರೇಮಾನಂದ ಶೆಟ್ಟಿ, ತಿಲಕ್ ರಾಜ್, ವಿಜಯ ಕುಮಾರ್ ಶೆಟ್ಟಿ, ರೂಪಾ ಡಿ. ಬಂಗೇರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News