ಮಂಗಳೂರು : ಉದ್ಯೋಗ ಸಿಗದವರಿಗೆ ತರಬೇತಿ!
ಮಂಗಳೂರು, ಫೆ. 25: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಉದ್ಯೋಗ ಮತ್ತು ಕೌಶಲ ತರಬೇತಿ ಶಿಬಿರ ಫೆ. 27ರಂದು ಮಂಗಳೂರಿನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ನಡೆಯಲಿದೆ. ಶಿಬಿರದಲ್ಲಿ ಉದ್ಯೋಗ ದೊರೆಯದ ಆಕಾಂಕ್ಷಿಗಳಿಗೆ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಸಿದ್ಧಗೊಳಿಸುವುದು ಈ ಶಿಬಿರದ ಪ್ರಮುಖ ವಿಶೇಷತೆಯಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ಯು. ರಾಜೇಶ್ ನಾಕ್ ಉಳಿಪಾಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ರೂಮನ್ ಟೆಕ್ನಾಲಜೀಸ್ ಸಂಸ್ಥೆ ಸಹಕಾರದಲ್ಲಿ ಶಿಬಿರ ನಡೆಯಲಿದ್ದು, ಇನ್‌ೆಸಿಸ್, ವಿಪ್ರೋ, ಎಚ್‌ಪಿ, ಲೈಫ್ಸ್ಟೈಲ್, ಹೆಲ್ವೆಟ್ ಪ್ಯಾಕರ್ಡ್, ಜಸ್ಟ್ ಡಯಲ್, ಪ್ಯಾಂಥಲೂನ್, ಬಿಗ್‌ಬಜಾರ್ ಸೇರಿದಂತೆ 100ಕ್ಕೂ ಅಧಿಕ ಕಂಪೆನಿಗಳು ಶಿಬಿರದಲ್ಲಿ ಭಾಗವಹಿಸಲಿವೆ ಎಂದರು.
ಸಂಸದ ನಳಿನ್‌ಕುಮಾರ್ ಕಟೀಲು ನೇತೃತ್ವದ ತಂಡ ಶಿಬಿರದ ಪೂರ್ಣ ಸಿದ್ಧತೆಗಳನ್ನು ಈಗಾಗಲೇ ನಡೆಸಿದೆ. 2000ಕ್ಕೂ ಅಧಿಕ ಅಭ್ಯರ್ಥಿಗಳು ಈಗಾಗಲೇ ನೋಂದಣಿ ಮಾಡಿದ್ದಾರೆ. ಸ್ಥಳದಲ್ಲೇ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸೂಕ್ತ ದಾಖಲೆ ಪತ್ರಗಳೊಂದಿಗೆ ನೇರವಾಗಿ ಶಿಬಿರದಲ್ಲಿ ಭಾಗವಹಿಸಬಹುದು. ಹತ್ತನೇ ತರಗತಿಯ ನಂತರದ ಎಲ್ಲಾ ಶೈಕ್ಷಣಿಕ ಅರ್ಹತೆಯುಳ್ಳ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು ಎಂದು ಅವರು ವಿವರಿಸಿದರು.
ಬೆಂಗಳೂರಿನ ಹ್ಯೂಮನ್ ಟೆಕ್ನಾಲಜಿಯ ನಂದಗೋಪಾಲ್ ಮಾತನಾಡಿ, ಮೇಳದಲ್ಲಿ ಭಾಗವಹಿಸಿದ ಎಲ್ಲರಿಗೂ ಉದ್ಯೋಗ ದೊರಕುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿದ್ದು, ಆಯ್ಕೆಯಾಗದವರ ಪಟ್ಟಿಯನ್ನು ಸಿದ್ಧಗೊಳಿಸಿ ಅವರಿಗೆ ತರಬೇತಿ ನೀಡಿ ಮುಂದಿನ ಹಂತದಲ್ಲಿ ಆಯ್ಕೆಗೆ ಪರಿಗಣಿಸಲಾಗುವುದು ಎಂದು ತಿಳಿಸಿದರು.
ಬೆಳಗ್ಗೆ 9.30ಕ್ಕೆ ಭಂಡಾರಿ ಫೌಂಡೇಶನ್‌ನ ಅಧ್ಯಕ್ಷ ಮಂಜುನಾಥ್ ಭಂಡಾರಿ ಉದ್ಘಾಟಿಸುವರು. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವ ರಾಜೀವ್ ಪ್ರತಾಪ್ ರೂಢಿ ಅಧ್ಯಕ್ಷತೆ ವಹಿಸುವರು. ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ನಂದಗೋಪಾಲ್ ವಿವರಿಸಿದರು.
ರೂಮನ್ ಸಂಸ್ಥೆಯು ಈಗಾಗಲೇ ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಚಿತ್ರದುರ್ಗಗಳಲ್ಲಿ ಇಂತಹ ಉದ್ಯೋಗ ಶಿಬಿರವನ್ನು ನಡೆಸಿದ್ದು, ಕಳೆದ ಜೂನ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಶಿಬಿರದಲ್ಲಿ 6500 ಅಭ್ಯರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ 450 ಮಂದಿಗೆ ಸ್ಥಳದಲ್ಲೇ ಉದ್ಯೋಗ ಲಭ್ಯವಾಗಿದ್ದರೆ, 1200 ಮಂದಿಯನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಅವರಲ್ಲಿ ಬೇಡಿಕೆ ಸಲ್ಲಿಸಿದ 600 ಮಂದಿಗೆ ತರಬೇತಿಯನ್ನು ಒದಗಿಸಲಾಗಿದೆ ಎಂದರು.
ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ವೆಬ್‌ಸೈಟ್ mlr.rooman.com ನ್ನು ಸಂಪರ್ಕಿಸಬಹುದು.
ಪ್ರಕಾಶ್ ಕೋಟ್ಯಾನ್, ವಿಕ್ರಂ ಉಪಸ್ಥಿತರಿದ್ದರು.