×
Ad

ಭಾರತೀಯ ರೈಲುಗಳ ಕುರಿತಂತೆ 10 ಕುತೂಹಲಕಾರಿ ವಿಷಯಗಳು

Update: 2016-02-25 20:05 IST

ಹೊಸದಿಲ್ಲಿ,ಫೆ.25: ವಿಶ್ವದ ನಾಲ್ಕನೆಯ ಅತ್ಯಂತ ದೊಡ್ಡ ರೈಲು ಜಾಲವಾಗಿರುವ ಭಾರತೀಯ ರೈಲ್ವೆಯು ದಿನಂಪ್ರತಿ ಅದನ್ನು ಬಳಸುವ 13 ಮಿಲಿಯ ಪ್ರಯಾಣಿಕರ ಜೀವನಾಡಿಯಾಗಿದೆ. ಇಲ್ಲಿವೆ ರೈಲ್ವೆಯ ಬಗ್ಗೆ ನೀವು ತಿಳಿದಿರಲೇಬೇಕಾದ ಹತ್ತು ಮುಖ್ಯ ವಿಷಯಗಳು.

*60,000 ಕಿ.ಮೀ.ಉದ್ದಕ್ಕೆ ಹರಡಿರುವ ಹಳಿಗಳ ಮೇಲೆ ಪ್ರತಿ ದಿನ ಸಂಚರಿಸುವ ರೈಲುಗಳ ಸಂಖ್ಯೆ 11,000

* ವಿಶ್ವದಲ್ಲಿ ಏಳನೇ ಅತಿ ದೊಡ್ಡ ಉದ್ಯೋಗದಾತನಾಗಿರುವ ರೈಲ್ವೆಯಲ್ಲಿನ ಸಿಬ್ಬಂದಿಗಳ ಸಂಖ್ಯೆ ಸುಮಾರು 1.54 ಮಿಲಿಯನ್

* ವಿವೇಕ್ ಎಕ್ಸ್‌ಪ್ರೆಸ್ ಅತಿ ದೂರ ಚಲಿಸುವ ರೈಲು. ದಿಬ್ರುಗಡದಿಂದ ಕನ್ಯಾಕುಮಾರಿವರೆಗಿನ 4,286 ಕಿ.ಮೀ.ದೂರವನ್ನು 82.30 ಗಂಟೆಗಳಲ್ಲಿ ಕ್ರಮಿಸುವ ಅದು 56 ನಿಲುಗಡೆಗಳನ್ನು ಹೊಂದಿದೆ. ಅಂದ ಹಾಗೆ ನಾಗಪುರ ಮತ್ತು ಅಜ್ನಿ ನಡುವಿನ ರೈಲು ಕ್ರಮಿಸುವ ದೂರ ಮೂರು ಕಿ.ಮೀ.ಮಾತ್ರ!

* ತ್ರಿವೇಂದ್ರಂ-ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ವಡೋದರಾ ಮತ್ತು ಕೋಟಾ ನಡುವಿನ 528 ಕಿ.ಮೀ.ಅಂತರವನ್ನು 6.5 ಗಂಟೆಗಳಲ್ಲಿ ಕ್ರಮಿಸುತ್ತದೆ ಮತ್ತು ಈ ಹಂತದಲ್ಲಿ ಅದು ಎಲ್ಲಿಯೂ ನಿಲ್ಲುವುದಿಲ್ಲ. ಇದು ಭಾರತದ ಅತ್ಯಂತ ಸುದೀರ್ಘ‘‘ನಾನ್ ಸ್ಟಾಪ್’’ರೈಲು ಆಗಿದ್ದರೆ ಹೌರಾ-ಅಮೃತಸರ ಎಕ್ಸ್‌ಪ್ರೆಸ್ ರೈಲು ಅತ್ಯಂತ ಹೆಚ್ಚಿನ...115 ನಿಲುಗಡೆಗಳನ್ನು ಹೊಂದಿದೆ.

 ಹೊಸದಿಲ್ಲಿ-ಭೋಪಾಲ ಶತಾಬ್ದಿ ಎಕ್ಸ್‌ಪ್ರೆಸ್ ಪ್ರತಿ ಘಂಟೆಗೆ ಗರಿಷ್ಠ 150ಕಿ.ಮೀ.ವೇಗದಲ್ಲಿ ಸಂಚರಿಸುವ ಮೂಲಕ ಭಾರತದ ಅತ್ಯಂತ ವೇಗದ ರೈಲು ಎಂಬ ಖ್ಯಾತಿಗೆ ಪಾತ್ರವಾಗಿದ್ದರೆ,ಗಂಟೆಗೆ ಸರಾಸರಿ 10 ಕಿ.ಮೀ.ವೇಗದಲ್ಲಿ ಸಂಚರಿಸುವ ನೀಲಗಿರಿ ಎಕ್ಸ್‌ಪ್ರೆಸ್ ದೇಶದ ಅತ್ಯಂತ ನಿಧಾದ ರೈಲು ಆಗಿದೆ.

* 65 ಗಂಟೆ 5 ನಿಮಿಷಗಳ ನಿಗದಿತ ಸಮಯದಲ್ಲಿ ತನ್ನ ಗಮ್ಯವನ್ನು ಸೇರಬೇಕಾದ ಗುವಾಹಟಿ-ತ್ರಿವೇಂದ್ರಂ ಎಕ್ಸ್‌ಪ್ರೆಸ್ ಪ್ರತಿ ಪ್ರಯಾಣದಲ್ಲಿಯೂ 10-12 ಗಂಟೆ ವಿಳಂಬವಾಗುವುದು ಸಾಮಾನ್ಯವಾಗಿಬಿಟ್ಟಿದೆ.

* ಚೆನ್ನೈ ಸಮೀಪ ಅರಕ್ಕೋಣಂ-ರೇಣಿಗುಂಟಾ ವಿಭಾಗದಲ್ಲಿರುವ ವೆಂಕಟನರಸಿಂಹರಾಜುವಾರಿಪೇಟಾ ಅತ್ಯಂತ ಉದ್ದ ಹೆಸರಿನ ನಿಲ್ದಾಣವಾಗಿದ್ದರೆ, ಒಡಿಶಾದ ಜರ್ಸುಗುಡಾ ಬಳಿಯ ಇಬ್ ಮತ್ತು ಗುಜರಾತ್‌ನ ಆನಂದ ಬಳಿಯ ಉದ್(ಇಂಗ್ಲೀಷ್‌ನಲ್ಲಿ ತಲಾ ಎರಡು ಅಕ್ಷರಗಳು) ಅತ್ಯಂತ ಚಿಕ್ಕ ಹೆಸರಿನ ನಿಲ್ದಾಣಗಳಾಗಿವೆ.

* ನವಪುರ ರೈಲ್ವೆ ನಿಲ್ದಾಣದ ಅರ್ಧ ಭಾಗ ಮಹಾರಾಷ್ಟ್ರದಲ್ಲಿದ್ದರೆ ಇನ್ನರ್ಧ ಭಾಗ ಗುಜರಾತ್‌ನಲ್ಲಿದೆ.

* ಶ್ರೀರಾಮಪುರ ಮತ್ತು ಬೇಲಾಪುರ ಇವೆರಡೂ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿರುವ ಬೇರೆ ಬೇರೆ ನಿಲ್ದಾಣಗಳು, ಆದರೆ ಇವುಗಳಿರುವುದು ಒಂದೇ ಹಳಿಯ ವಿರುದ್ಧ ದಿಕ್ಕುಗಳಲ್ಲಿ.

1981,ಜೂನ್ 6ರಂದು ಪ್ರಯಾಣಿಕರ ರೈಲೊಂದು ಬಾಗಮತಿ ನದಿಗೆ ಬಿದ್ದು 800 ಪ್ರಯಾಣಿಕರು ಜಲಸಮಾಧಿಯಾಗಿದ್ದರು. ಇದು ಭಾರತದಲ್ಲಿ ಸಂಭವಿಸಿರುವ ಅತ್ಯಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಬಲಿ ಪಡೆದಿರುವ ರೈಲ್ವೆ ಅಪಘಾತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News