ರೈಲ್ವೆ ಬಜೆಟ್ ಎಲ್ಲ ಕ್ಷೇತ್ರಗಳಿಗೂ ಪೂರಕ:ಪ್ರಧಾನಿ ಮೋದಿ
ಹೊಸದಿಲ್ಲಿ,ಫೆ.25: ಯಾವುದೇ ದರ ಏರಿಕಯನ್ನು ಪ್ರಸ್ತಾಪಿಸಿರದ ರೈಲ್ವೆ ಮುಂಗಡ ಪತ್ರವು ಸಮಾಜದ ಎಲ್ಲ ವರ್ಗಗಳಿಗೆ ಅನುಕೂಲಕರವಾಗಿದೆ ಮತ್ತು ಅಧಿಕ ವೇಗದ ರೈಲುಗಳು ಮತ್ತು ಸುರಕ್ಷತೆಯ ಗುರಿಯೊಂದಿಗೆ ಭಾರತೀಯ ರೈಲ್ವೆಯ ಪುನರ್‌ಸಂಘಟನೆ ಮತ್ತು ಪುನಃಶ್ಚೇತನದ ದೂರದೃಷ್ಟಿಯನ್ನು ಪ್ರತಿನಿಧಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಲ್ಲಿ ಹೇಳಿದರು.
ಮುಂಗಡಪತ್ರವನ್ನು ಪ್ರಯಾಣಿಕ ಸ್ನೇಹಿ ಎಂದು ಬಣ್ಣಿಸಿದ ಅವರು,ಅದು ದೇಶವನ್ನು ಪುನಃಶ್ಚೇತನಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದರು.
ಸಮಾಜದ ಎಲ್ಲ ವರ್ಗಗಳ ಅಗತ್ಯಗಳ ಬಗ್ಗೆ ಈ ಮುಂಗಡಪತ್ರವು ಕಾಳಜಿಯನ್ನು ಹೊಂದಿದೆ ಮತ್ತು ಮೂಲಸೌಕರ್ಯ ಪ್ರೇರಿತ ಮತ್ತು ಉದ್ಯೋಗ ಸೃಷ್ಟಿಯ ಬಜೆಟ್ ಆಗಿರುವ ಮೂಲಕ ಭಿನ್ನವಾಗಿದೆ ಎಂದು ಅವರು ಹೇಳಿದರು.
ಅಭಿವೃದ್ಧಿ ದೃಷ್ಟಿಯ ಈ ಮುಂಗಡಪತ್ರದಿಂದಾಗಿ ರೈಲ್ವೆಯನ್ನು ಸಮಗ್ರವಾಗಿ ರೂಪಾಂತರಗೊಳಿಸುವ ಸರಕಾರದ ಪ್ರಯತ್ನಗಳು ಇನ್ನಷ್ಟು ವೇಗವನ್ನು ಪಡೆದುಕೊಳ್ಳಲಿವೆ ಎಂದರು.
ಮುಂಗಡಪತ್ರದಲ್ಲಿ ಉಲ್ಲೇಖಿಸಲಾಗಿರುವ‘‘ವಿಜನ್ 2020’’ ಅಧಿಕ ವೇಗ,ಸಮಯ ಪಾಲನೆ ಮತ್ತು ಸುರಕ್ಷತೆಯೊಂದಿಗೆ ರೈಲ್ವೆಯನ್ನು ಸಾಮರ್ಥ್ಯ ನಿರ್ಬಂಧಗಳಿಂದ ಮುಕ್ತಗೊಳಿಸಲಿದೆ ಎಂದು ಮೋದಿ ಹೇಳಿದರು.