ರಿಸರ್ವೇಶನ್ ಇಲ್ಲದೆ, ಸೂಪರ್‌ಫಾಸ್ಟ್ ರೈಲುಗಳಲ್ಲಿ ಪ್ರಯಾಣಿಸಿ !
ಹೊಸದಿಲ್ಲಿ, ಫೆ.25: ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ಲೋಕಸಭೆಯಲ್ಲಿ ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಹಮ್‌ಸಫರ್, ತೇಜಸ್, ಉದಯ್ ಹಾಗೂ ಅಂತ್ಯೋದಯ ಎಂಬ ಮೂರು ವಿನೂತನ ಮಾದರಿಯ ರೈಲುಗಳ ಆರಂಭವನ್ನು ಪ್ರಕಟಿಸಿದರು.
ಹಮ್‌ಸಫರ್, ಬಜೆಟ್ ಪ್ರಯಾಣಿಕರಿಗಾಗಿನ ಸಂಪೂರ್ಣ ಹವಾನಿಯಂತ್ರಿತ ರೈಲಾಗಿದ್ದು, ಪ್ರಯಾಣಿಕರು ತಮ್ಮ ಆಯ್ಕೆಯ ಭೋಜನವನ್ನು ಪಡೆಯುವ ವ್ಯವಸ್ಥೆಯಿದೆ. ‘ತೇಜಸ್’ ರೈಲು ಮನರಂಜನೆ ಹಾಗೂ ಸ್ಥಳೀಯ ಖಾದ್ಯ ಲಭ್ಯತೆಯಂತಹ ಗುಣಮಟ್ಟದ ಸೇವೆಗಳನ್ನು ಒದಗಿಸುವ ಮೂಲಕ ಭವಿಷ್ಯದ ಹೈಸ್ಪೀಡ್ ಬುಲೆಟ್ ಟ್ರೇನ್‌ಗಳ ಮುನ್ನೋಟವನ್ನು ನಮ್ಮ ಮುಂದಿಡಲಿದೆ. ತಾಸಿಗೆ 130 ಕಿ.ಮೀ. ವೇಗದಲ್ಲಿ ಪ್ರಯಾಣಿಸಲಿರುವ ಬುಲೆಟ್ ರೈಲು, ವೈಫಿ ಸೇವೆಗಳನ್ನು ಒದಗಿಸಲಿದೆಯೆಂದು ಸಚಿವರು ತಿಳಿಸಿದರು.
ಉದಯ್ ಎಕ್ಸ್‌ಪ್ರೆಸ್ ದೇಶದ ಅತ್ಯಂತ ಪ್ರಯಾಣಿಕ ದಟ್ಟಣೆಯ ರೈಲು ಮಾರ್ಗಗಳಲ್ಲಿ ರಾತ್ರಿ ಸಮಯದಲ್ಲಿ ದೊರೆಯುವ ಡಬಲ್‌ಡೆಕ್ಕರ್ ಸೇವೆಯಾಗಲಿದೆಯೆಂದರು. ಶ್ರೀಸಾಮಾನ್ಯರಿಗಾಗಿ ‘ಅಂತ್ಯೋದಯ ಎಕ್ಸ್‌ಪ್ರೆಸ್’ ಹಾಗೂ ‘ ದೀನ್ ದಯಾಳು ಕೋಚ್’ಗಳನ್ನು ಆರಂಭಿಸಲಾಗುವುದೆಂದು ಅವರು ತಿಳಿಸಿದರು. ಅಂತ್ಯೋದಯ ಎಕ್ಸ್‌ಪ್ರೆಸ್‌ನಲ್ಲಿ, ಜನರು ಮೀಸಲಾತಿಯಿಲ್ಲದೆ ಸೂಪರ್‌ಫಾಸ್ಟ್ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ. ಅವರಿಗೆ ಉಚಿತವಾಗಿ ಕುಡಿಯವ ನೀರು ಒದಗಿಸಲಾಗುವುದು ಹಾಗೂ ತಮ್ಮ ಮೊಬೈಲ್‌ಫೋನ್‌ಗಳಿಗೆ ವಿದ್ಯುತ್ ರೀಚಾರ್ಜ್ ಮಾಡಲು ಅಧಿಕ ಪಾಯಿಂಟ್‌ಗಳನ್ನು ಅಳವಡಿಸಲಾಗುವುದು ಎಂದು ಸುರೇಶ್ ಪ್ರಭು ತಿಳಿಸಿದರು.
ಮೀಸಲುರಹಿತ, ಸೂಪರ್‌ಫಾಸ್ಟ್ ರೈಲುಗಳು, ಅಂತ್ಯೋದಯ ಎಕ್ಸ್‌ಪ್ರೆಸ್ ಹಾಗೂ ದೀನ್‌ದಯಾಳ್ ಕೋಚುಗಳು ಬಡವರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ನಮ್ಮ ಅಚಲ ಬದ್ಧತೆಯನ್ನು ನಿರೂಪಿಸುತ್ತದೆಯೆಂದು ಪ್ರಧಾನಿ ನರೇಂದ್ರ ಮೋದಿ ರೈಲ್ವೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸುತ್ತಾ ತಿಳಿಸಿದ್ದಾರೆ.