ಏರಿಕೆಯಿಲ್ಲದ ಬಜೆಟ್
ಪ್ರಯಾಣ, ಸರಕು ಸಾಗಣೆ ದರದಲ್ಲಿ ಬದಲಾವಣೆ ಇಲ್ಲ
ಹೊಸದಿಲ್ಲಿ, ಫೆ.25: ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ಲೋಕಸಭೆಯಲ್ಲಿ ತನ್ನ ಎರಡನೆ ಬಜೆಟ್ ಮಂಡಿಸಿದರು. 2016-17ರ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣ ದರ ಮತ್ತು ಸರಕು ಸಾಗಣೆ ದರವನ್ನು ಏರಿಸಲಾಗಿಲ್ಲ. ಇದೇ ವೇಳೆ, ನೂತನ ರೈಲ್ವೆ ಬಜೆಟ್ ಮೂರು ಹೊಸ ಸೂಪರ್‌ಫಾಸ್ಟ್ ರೈಲುಗಳನ್ನು ಪರಿಚಯಿಸುವ ಭರವಸೆ ನೀಡಿದೆ ಹಾಗೂ 2019ರ ವೇಳೆಗೆ ಸರಕು ಸಾಗಣೆಯ ಉದ್ದೇಶಕ್ಕಾಗಿಯೇ ಮೀಸಲಾದ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಮತ್ತು ಪೂರ್ವ ಕರಾವಳಿ ಸರಕು ಕಾರಿಡಾರ್‌ಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹೊಂದಿದೆ
ಇತರ ಸಾರಿಗೆ ವಿಧಾನಗಳನ್ನು ಗಣನೆಗೆ ತೆಗೆದುಕೊಂಡು ಸ್ಪರ್ಧಾತ್ಮಕ ದರ ವ್ಯವಸ್ಥೆಯನ್ನು ರೂಪಿಸುವ ಭರವಸೆಯನ್ನು ಸುರೇಶ್ ಪ್ರಭು ನೀಡಿದರು. ಹೆಚ್ಚುವರಿ ಆದಾಯ ಸಂಗ್ರಹಕ್ಕಾಗಿ ಸರಕು ಸಾಗಣೆ ವ್ಯಾಪ್ತಿಯನ್ನು ಹಿಗ್ಗಿಸುವುದಾಗಿ ಹೇಳಿದರು.
ಕಳೆದ ವರ್ಷ ಪ್ರಯಾಣ ಮತ್ತು ಸರಕು ಸಾಗಣೆ ದರವನ್ನು ಗಣನೀಯವಾಗಿ ಹೆಚ್ಚಿಸಿದ್ದ ರೈಲ್ವೆ ಸಚಿವರು, ಈ ಬಾರಿ ದರ ಹೆಚ್ಚಿಸುವ ಗೋಜಿಗೆ ಹೋಗಲಿಲ್ಲ.
ರೈಲ್ವೆ ಸಚಿವರು ಘೋಷಿಸಿದ ಮೂರು ಹೊಸ ಸೂಪರ್‌ಫಾಸ್ಟ್ ರೈಲುಗಳ ಪೈಕಿ ‘ಹಮ್‌ಸಫರ್’ ಒಂದು. ಅದು ಸಂಪೂರ್ಣ ಏರ್‌ಕಂಡೀಶನ್ಡ್ 3ಎಸಿ ವ್ಯವಸ್ಥೆಯನ್ನು ಹೊಂದಿದೆ ಹಾಗೂ ಊಟಕ್ಕೆ ಆದೇಶ ನೀಡುವ ಆಯ್ಕೆಯನ್ನೂ ಹೊಂದಿದೆ. ಇನ್ನೊಂದು ಸೂಪರ್‌ಫಾಸ್ಟ್ ರೈಲು ‘ತೇಜಸ್’. ಗಂಟೆಗೆ 130 ಕಿ.ಮೀ. ವೇಗದಲ್ಲಿ ಓಡುವ ಈ ರೈಲನ್ನು ಭಾರತದ ಭವಿಷ್ಯದ ರೈಲು ಎಂಬುದಾಗಿ ಬಿಂಬಿಸಲಾಗಿದೆ. ಈ ರೈಲಿನಲ್ಲಿ ಮನರಂಜನೆ, ಸ್ಥಳೀಯ ಅಡುಗೆ ಮತ್ತು ವೈಫೈ ಸೌಲಭ್ಯ ಲಭ್ಯವಿದೆ.
‘ಉದಯ್’ ರಾತ್ರಿ ಸಂಚಾರದ ಡಬಲ್-ಡೆಕರ್ ರೈಲು. ಅದರ ಜೊತೆಗೆ ಓಡುತ್ತದೆ ‘ಉತ್ಕೃಷ್ಟ್’ ಡಬಲ್ ಡೆಕರ್ ಏರ್ ಕಂಡೀಶನ್ಡ್ ಯಾತ್ರಿ ಎಕ್ಸ್‌ಪ್ರೆಸ್.
ಮುಂಗಡ ಟಿಕೆಟ್ ಕಾದಿರಿಸದ ಪ್ರಯಾಣಿಕರ ಪ್ರಯಾಣ ಗುಣಮಟ್ಟವನ್ನು ಸುಧಾರಿಸುವುದಕ್ಕಾಗಿ ಸೂಪರ್‌ಫಾಸ್ಟ್ ‘ಅಂತ್ಯೋದಯ’ ಎಕ್ಸ್‌ಪ್ರೆಸ್ ರೈಲನ್ನು ಸಚಿವರು ಘೋಷಿಸಿದ್ದಾರೆ.
ಈ ರೈಲಿನಲ್ಲಿ ‘ದೀನ ದಯಾಳು’ ಕಾದಿರಿಸಲ್ಪಡದ ಕೋಚ್‌ಗಳು ಇರುತ್ತವೆ ಹಾಗೂ ಈ ಕೋಚ್‌ಗಳಲ್ಲಿ ಕುಡಿಯುವ ನೀರು ಮತ್ತು ಹೆಚ್ಚಿನ ಸಂಖ್ಯೆಯ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳಿರುತ್ತವೆ.
ರೈಲು ಅಭಿವೃದ್ಧಿ ಪ್ರಾಧಿಕಾರ
ಸೇವೆಗಳಿಗೆ ನ್ಯಾಯೋಚಿತ ಬೆಲೆ ನಿಗದಿ ಮಾಡಲು, ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು, ಬಳಕೆದಾರ ಹಿತಾಸಕ್ತಿಯನ್ನು ರಕ್ಷಿಸಲು ಮತ್ತು ದಕ್ಷತೆ ಮಾನಕಗಳನ್ನು ನಿರ್ಧರಿಸಲು ರೈಲು ಅಭಿವೃದ್ಧಿ ಪ್ರಾಧಿಕಾರವೊಂದನ್ನು ರಚಿಸುವುದಾಗಿ ಸಚಿವರು ಘೋಷಿಸಿದರು. ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಸಂಬಂಧ ಕರಡು ಮಸೂದೆಯನ್ನು ಸಿದ್ಧಪಡಿಸಲಾಗುವುದು ಎಂದು ಸಚಿವರು ನುಡಿದರು.
ಮುಂದಿನ ವರ್ಷದ ಬಜೆಟ್ ಅಂದಾಜುಗಳನ್ನು ಪಟ್ಟಿ ಮಾಡಿದ ಸಚಿವರು, ಬಜೆಟ್ ಯೋಜನಾ ಗಾತ್ರ 1.21 ಲಕ್ಷ ಕೋಟಿ ರೂ. ಎಂದು ಘೋಷಿಸಿದರು.
ಮುಂದಿನ ಹಣಕಾಸು ವರ್ಷದಲ್ಲಿ ಒಟ್ಟು ರೈಲು ಸಂಚಾರದ ಒಟ್ಟು ಆದಾಯವನ್ನು 1.84 ಲಕ್ಷ ಕೋಟಿ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಅದೇ ವೇಳೆ, ಪ್ರಯಾಣಿಕರಿಂದ ಬರುವ ಆದಾಯ ಬೆಳವಣಿಗೆಯನ್ನು 12.4 ಶೇ.ಕ್ಕೆ ಮಿತಿಗೊಳಿಸಿದೆ.
5 ಕೋಟಿ ಟನ್ ಸರಕು ಸಾಗಣೆ ಗುರಿಯನ್ನು ಹಾಕಿಕೊಳ್ಳಲಾಗಿದೆ ಹಾಗೂ ಸರಕು ಸಾಗಣೆಯಿಂದ ಬರುವ ಆದಾಯವನ್ನು 1.17 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಇತರ ಕೋಚಿಂಗ್ ಮತ್ತು ವಿವಿಧ ಮೂಲಗಳಿಂದ ಬರುವ ಆದಾಯವನ್ನು ಕ್ರಮವಾಗಿ 6,185 ಕೋಟಿ ರೂ. ಮತ್ತು 9,590 ಕೋಟಿ ರೂ. ಎಂದು ಗುರಿ ನಿಗದಿಪಡಿಸಲಾಗಿದೆ.
ಮುಂದಿನ ವರ್ಷದಲ್ಲಿ ಪಿಂಚಣಿ ಪಾವತಿಗೆ 45,500 ಕೋಟಿ ರೂ.ಯನ್ನು ತೆಗೆದಿರಿಸಲಾಗಿದೆ. 1.84 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಕೆಯ ಗುರಿಯನ್ನು ಹೊಂದಲಾಗಿದೆ.
8,720 ಕೋ.ರೂ. ಉಳಿತಾಯ
ಪ್ರಸಕ್ತ ವರ್ಷದ ಆರ್ಥಿಕ ನಿರ್ವಹಣೆಯಿಂದಾಗಿ 8,720 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ರೈಲ್ವೆ ಸಚಿವರು ಪ್ರಕಟಿಸಿದರು.
ಸರಕು ಕಾರಿಡಾರ್‌ಗಳು
ರೈಲ್ವೆ ಸಚಿವರು ಮೂರು ಸರಕು ಕಾರಿಡಾರ್‌ಗಳ ರಚನೆಯನ್ನು ಘೋಷಿಸಿದರು. ಉತ್ತರ-ದಕ್ಷಿಣ ಕಾರಿಡಾರ್ ದಿಲ್ಲಿ ಮತ್ತು ಚೆನ್ನೈಗಳನ್ನು ಸಂಪರ್ಕಿಸಿದರೆ, ಪೂರ್ವ-ಪಶ್ಚಿಮ ಕಾರಿಡಾರ್ ಖರಗಪುರ ಮತ್ತು ಮುಂಬೈಗಳನ್ನು ಜೋಡಿಸಲಿದೆ. ಪೂರ್ವ ಕರಾವಳಿ ಕಾರಿಡಾರ್ ಖರಗಪುರದಿಂದ ವಿಜಯವಾಡದವರೆಗೆ ವ್ಯಾಪಿಸಿದೆ.
♦♦♦
‘‘ರೈಲ್ವೆ ಸಚಿವಾಲಯವೇ ಹಳಿ ತಪ್ಪಿದೆ’’
2016-17ರ ಸಾಲಿಗೆ ದರ ಏರಿಕೆಯಿಲ್ಲದ ರೈಲ್ವೆ ಬಜೆಟನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ಮಂಡಿಸಿದ್ದಾರೆ. ಬಜೆಟ್‌ಗೆ ವಿವಿಧ ರಾಜಕೀಯ ನಾಯಕರು ನೀಡಿರುವ ಪ್ರತಿಕ್ರಿಯೆಗಳು ಇಂತಿವೆ:
ಇದೊಂದು ದೂರದೃಷ್ಟಿಯ ಬಜೆಟ್; ಇಲ್ಲಿ ಪರಿಚಯಿಸಲಾದ ಹಲವಾರು ಕ್ರಮಗಳು ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ನೆರವಾಗುತ್ತವೆ.
- ರಾಜ್‌ನಾಥ್ ಸಿಂಗ್, ಕೇಂದ್ರ ಗೃಹಸಚಿವ
....
ಬಯೋ ವ್ಯಾಕ್ಯೂಮ್ ಶೌಚಾಲಯಗಳನ್ನು ಹೊರತುಪಡಿಸಿ 2016-17ರ ಬಜೆಟ್‌ನಲ್ಲಿ ಹೊಸದೇನೂ ಇಲ್ಲ. ಈ ಶೌಚಾಲಯಗಳು ಎಷ್ಟು ಯಶಸ್ವಿಯಾಗುತ್ತವೆ ಎಂದು ನನಗೆ ಗೊತ್ತಿಲ್ಲ.
- ಪವನ್ ಕುಮಾರ್ ಬನ್ಸಾಲ್, ಮಾಜಿ ರೈಲ್ವೆ ಸಚಿವ
....
ವಾಸ್ತವಿಕ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸಚಿವರು ರೈಲ್ವೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
- ವೆಂಕಯ್ಯ ನಾಯ್ಡು, ಕೇಂದ್ರ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ
...
ಬಿಜೆಪಿ ಆಡಳಿತದಲ್ಲಿ ರೈಲ್ವೆ ಸಚಿವಾಲಯ ಸಂಪೂರ್ಣವಾಗಿ ಹಳಿತಪ್ಪಿದೆ.
- ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ಅಧ್ಯಕ್ಷ ಹಾಗೂ ಮಾಜಿ ರೈಲ್ವೆಸಚಿವ
....
ಬಜೆಟನ್ನು ನಿಜವಾಗಿಯೂ ಮಂಡಿಸಲಾಗಿದೆಯೇ, ಇಲ್ಲವೇ ಎಂಬ ಬಗ್ಗೆ ನಮಗೆ ಸಂದೇಹವಿದೆ.
- ಶಶಿ ತರೂರ್, ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ
♦♦♦
ತ್ರಿವಿಧ ಮಾರ್ಗದ ಮೂಲಕ ರೈಲ್ವೆಗೆ ಕಾಯಕಲ್ಪ
ತ್ರಿವಿಧ ಮಾರ್ಗದ ಮೂಲಕ ರೈಲ್ವೆಯನ್ನು ಪರಿವರ್ತಿಸುವ ನೂತನ ಯೋಜನೆಯೊಂದನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ಘೋಷಿಸಿದ್ದಾರೆ.
ನೂತನ ಆದಾಯ: ದರ ಏರಿಕೆ ಬಗ್ಗೆ ಪುನರಾಲೋಚನೆ ಮಾಡುವುದು ಹಾಗೂ ನೂತನ ಆದಾಯ ಮೂಲಗಳನ್ನು ಗುರುತಿಸುವುದು.
ನೂತನ ನಿಯಮಗಳು: ಗರಿಷ್ಠ ಉತ್ಪಾದಕತೆ ಸಾಧಿಸಲು ಪ್ರತಿ ರೂಪಾಯಿಯ ಖರ್ಚನ್ನು ಮರುಪರಿಶೀಲನೆ ನಡೆಸುವುದು.
ನೂತನ ವಿನ್ಯಾಸ: ಸಮಸ್ಯೆಗಳನ್ನು ಪರಿಹರಿಸುವ ಸಾಂಪ್ರದಾಯಿಕ ವಿಧಾನಗಳನ್ನು ಪುನರ್‌ಪರಿಶೀಲಿಸುವುದು.