×
Ad

ಸಂಸತ್ ದಾಳಿಯಲ್ಲಿ ಅಫ್ಝಲ್ ಶಾಮೀಲಾತಿ ಬಗ್ಗೆ ‘ಗಂಭೀರ ಶಂಕೆ’: ಚಿದಂಬರಂ

Update: 2016-02-25 23:30 IST

ಹೊಸದಿಲ್ಲಿ, ಫೆ.25: ಸಂಸತ್ ಮೇಲೆ 2001ರಲ್ಲಿ ನಡೆದ ದಾಳಿಯಲ್ಲಿ ಅಫ್ಝಲ್ ಗುರುವಿನ ಶಾಮೀಲಾತಿ ಬಗ್ಗೆ ‘ಗಂಭೀರ ಸಂಶಯ’ಗಳಿದ್ದು ಆ ಪ್ರಕರಣವನ್ನು ‘ಪ್ರಾಯಶಃ ಸರಿಯಾಗಿ ತೀರ್ಮಾನಿಸಿಲ್ಲ’ವೆಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ಹಿಂದಿನ ಯುಪಿಎ ಸರಕಾರ 2011ರಲ್ಲಿ ಅಫ್ಝಲ್‌ನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿ ದ್ದಾಗ ಚಿದಂಬರಂ ಗೃಹಸಚಿವರಾಗಿದ್ದರು. ಅಫ್ಫಲ್‌ನನ್ನು ಎರಡು ವರ್ಷಗಳ ನಂತರ ಗಲ್ಲಿಗೇರಿಸಲಾಗಿತ್ತು.
   
‘‘ಈ ಸಂಚಿನಲ್ಲಿ ಆತನ ಶಾಮೀಲಾತಿಯ ಬಗ್ಗೆ ಗಂಭೀರ ಸಂಶಯಗಳಿವೆ, ಆತ ಒಂದು ವೇಳೆ ಶಾಮೀಲಾಗಿದ್ದರೂ ಆತ ಎಷ್ಟರ ಮಟ್ಟಿಗೆ ಶಾಮೀಲಾಗಿದ್ದನೆಂಬ ಬಗ್ಗೆಯೂ ಸಂಶಯವಿದೆ. ಆತನನ್ನು ಯಾವುದೇ ಪೆರೋಲ್ ಇಲ್ಲದೆ ಜೀವಿತಾವಧಿವರೆಗೆ ಜೈಲುಶಿಕ್ಷೆಗೆ ಶಿಕ್ಷೆಗೊಳಪಡಿಸಬಹುದಾಗಿತ್ತು’’ ಎಂದು ಚಿದಂಬರಂ ಹೇಳಿದ್ದಾರೆಂದು ದಿ ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅಫ್ಝಲ್ ಪ್ರಕರಣದಲ್ಲಿ ನ್ಯಾಯಾಲಯಗಳು ಸರಿಯಾದ ತೀರ್ಮಾನಗಳಿಗೆ ಬಂದಿವೆಯೇ ಹಾಗೂ ಮರಣದಂಡನೆ ಆತನಿಗೆ ಸರಿಯಾದ ಶಿಕ್ಷೆಯಾಗಿತ್ತೇ ಎಂಬ ಪ್ರಶ್ನೆಗಳಿಗೆ ಚಿದಂಬರಂ ಉತ್ತರಿಸುತ್ತಿದ್ದರು. ಅಫ್ಝಲ್‌ಗೆ ಗಲ್ಲು ಶಿಕ್ಷೆ ನೀಡಿದ ದಿನದ ಸ್ಮರಣಾರ್ಥ ಜೆಎನ್‌ಯುನಲ್ಲಿ ಕೆಲವು ದಿನಗಳ ಹಿಂದೆ ಆಯೋಜಿಸಲಾದ ಕಾರ್ಯಕ್ರಮವೊಂದು ವಿವಾದಕ್ಕೀಡಾಗಿ ಆರು ಮಂದಿ ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಆರೋಪ ಹೊರಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕಾಶ್ಮೀರಿ ಪ್ರತ್ಯೇಕತಾವಾದಿಗಳು ಕೂಡ ಆತನಿಗೆ ನೀಡಲಾದ ಗಲ್ಲುಶಿಕ್ಷೆಯನ್ನು ತಮಗೆ ಬೆಂಬಲ ಪಡೆಯುವುದಕ್ಕಾಗಿ ಉಪಯೋಗಿಸುತ್ತಿದ್ದಾರೆ.
 ‘‘ಅಫ್ಝಲ್ ಗುರು ಪ್ರಕರಣವನ್ನು ಪ್ರಾಯಶಃ ಸರಿಯಾಗಿ ತೀರ್ಮಾನಿಸಿಲ್ಲವೆಂಬ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತಪಡಿಸುವುದು ಸಾಧ್ಯವೆಂದು ನನಗನಿಸುತ್ತದೆ,’’ ಎಂದು 2008ರಿಂದ 2012ರವರೆಗೆ ಗೃಹ ಸಚಿವರಾಗಿದ್ದ ಚಿದಂಬರಂ ಹೇಳಿದರು.
  ಅಫ್ಝಲ್‌ನನ್ನು ಗಲ್ಲಿಗೇರಿಸಿದ ಸರಕಾರದಲ್ಲಿ ನೀವೂ ಇದ್ದಿರಲ್ಲವೇ ಎಂಬ ಪ್ರಶ್ನೆಗೆ ತಾನು ಆಗ ಗೃಹ ಸಚಿವನಾಗಿರಲಿಲ್ಲ ಎಂದು ಚಿದಂಬರಂ ಹೇಳಿದರು.
  ‘‘ನಾನು ಗೃಹ ಸಚಿವನಾಗಿದ್ದರೆ ಏನು ಮಾಡುತ್ತಿದ್ದೆನೆಂದು ಹೇಳಲು ಸಾಧ್ಯವಿಲ್ಲ. ನೀವು ಆ ಕುರ್ಚಿಯಲ್ಲಿ ಕುಳಿತಿದ್ದರೆ ಮಾತ್ರ ನೀವು ಆ ನಿರ್ಧಾರವನ್ನು ತೆಗೆದುಕೊಳ್ಳಬಹುದು’’ಎಂದು ಅವರು ಅಭಿಪ್ರಾಯ ಪಟ್ಟರು.
 ಆಗಿನ ಸರಕಾರ ಕೋರ್ಟ್ ತೀರ್ಮಾನವನ್ನು ತಪ್ಪೆಂದು ಹೇಳುತ್ತಿರಲಿಲ್ಲವೆಂದ ಚಿದಂಬರಂ ಅದೇ ಸಮಯ ‘‘ಈ ಪ್ರಕರಣದಲ್ಲಿ ನ್ಯಾಯಾಲಯ ಸರಿಯಾಗಿ ತೀರ್ಮಾನಿಸಿಲ್ಲವೆಂಬ ಅಭಿಪ್ರಾಯವನ್ನು ಸ್ವತಂತ್ರ ವ್ಯಕ್ತಿಯೊಬ್ಬ ಹೊಂದಬಹುದು’’ ಎಂದರು.
ಇಂತಹ ಒಂದು ಅಭಿಪ್ರಾಯ ಹೊಂದಿರುವ ಯಾರಿಗೇ ಆದರೂ ‘ದೇಶ-ವಿರೋಧಿ’ ಎಂದು ಹಣೆಪಟ್ಟಿ ಹಚ್ಚುವುದು ತಪ್ಪು ಎಂದು ಹೇಳಿದ ಅವರು ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧದ ದೇಶದ್ರೋಹ ಆರೋಪವನ್ನು ‘ಅತಿರೇಕದ ಕ್ರಮ’ವೆಂದು ಬಣ್ಣಿಸಿದರು.
 
‘‘ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ದೇಶದ್ರೋಹದ ಭಾಷಣವಲ್ಲ. ನಿಮ್ಮ ಭಾಷಣ ಬಂದೂಕಿನ ಸಿಡಿಮದ್ದಿಗೆ ಕಿಡಿ ಹೊತ್ತಿಸಿದರೆ ಮಾತ್ರ ಅದು ದೇಶದ್ರೋಹವಾಗುತ್ತದೆ,’’ ಎಂದು ಚಿದಂಬರಂ ಹೇಳಿದರು.
 ‘‘ತಪ್ಪು ಮಾಡುವ ಹಕ್ಕು ವಿದ್ಯಾರ್ಥಿಗಳಿಗಿರುವ ಕಾಲವಿದು. ವಿಶ್ವವಿದ್ಯಾನಿಲಯವೊಂದು ನೀವು ಯಾವತ್ತೂ ಗಾಢ ಚಿಂತಕರಾಗಿದ್ದುಕೊಂಡಿರಬೇಕಾದ ಸ್ಥಳವಲ್ಲ. ನೀವು ಕೆಲವೊಮ್ಮೆ ಹಾಸ್ಯಾಸ್ಪದವಾಗಿಯೂ ಇರಬಹುದು’’ಎಂದು ಮಾಜಿ ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News