ಆಸ್ಟ್ರೇಲಿಯದ ಸೇನಾ ವೆಚ್ಚ ಗಣನೀಯ ಹೆಚ್ಚಳ
ಆಸ್ಟ್ರೇಲಿಯ, ಫೆ.25: ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಆಸ್ಟ್ರೇಲಿಯಾ ಗುರುವಾರ ಪ್ರಕಟಿಸಿದ್ದು, ಮುಂದಿನ ಒಂದು ದಶಕದಲ್ಲಿ 139 ಶತಕೋಟಿ ಡಾಲರ್ ವೆಚ್ಚ ಮಾಡಲು ನಿರ್ಧರಿಸಿದೆ ಎಂದು ಪ್ರಧಾನಿ ಮಾಲ್ಕಂ ಟರ್ನ್‌ಬುಲ್ ಪ್ರಕಟಿಸಿದ್ದಾರೆ. ಇದರಲ್ಲಿ ಬಹುಪಾಲು ಏಷ್ಯಾದ್ದಾಗಿರುತ್ತದೆ ಎಂಬ ಸುಳಿವು ನೀಡಿದ್ದಾರೆ.
ರಕ್ಷಣಾ ಶ್ವೇತಪತ್ರ ಬಿಡುಗಡೆ ಮಾಡಿ ಈ ಘೋಷಣೆ ಮಾಡಿದ ಅವರು, ದೇಶದ ನೌಕಾಪಡೆ ಗಾತ್ರವನ್ನು ದ್ವಿಗುಣಗೊಳಿಸುವುದು, ಸಬ್‌ಮೆರಿನ್ ಸಂಖ್ಯೆಯನ್ನು 24ಕ್ಕೆ ಹೆಚ್ಚಿಸುವುದು, ಹೆಚ್ಚುವರಿಯಾಗಿ ಮೂರು ವಾಯು ಯುದ್ಧಕ್ಷೇತ್ರ ಧ್ವಂಸಕಗಳನ್ನು ಸೇರ್ಪಡೆಗೊಳಿಸುವುದು, ಒಂಬತ್ತು ಸಬ್‌ಮೆರಿನ್ ನಿರೋಧಕ ವಾಹಕಗಳ ಸೇರ್ಪಡೆ ಹಾಗೂ 12 ಗಸ್ತು ನೌಕೆಗಳ ಸೇರ್ಪಡೆ ಇದರಲ್ಲಿ ಒಳಗೊಂಡಿವೆೆ.ಮಹತ್ವಾಕಾಂಕ್ಷಿ ಯೋಜನೆಯಡಿ 2,500 ಹೊಸ ಮಿಲಿಟರಿ ಉದ್ಯೋಗ ಸೃಷ್ಟಿ ಮಾಡಿ, ಒಟ್ಟು ಸೈನಿಕ ಬಲವನ್ನು 62,400ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.
‘ಇದು ಸ್ಮರಣೀಯ ಸಮಯ. ಅಗತ್ಯತೆ ಬಹಳವಾಗಿದೆ. ಅವಕಾಶಗಳು ವಿಸ್ತರಣೆಯಾಗುತ್ತಿದ್ದು, ಅಂತೆಯೇ ಅವುಗಳನ್ನು ಕಳೆದುಕೊಳ್ಳುವುದು ದುಬಾರಿಯಾಗುತ್ತದೆ ಎಂದು ಟರ್ನ್
ಬುಲ್ ಹೇಳಿದ್ದಾರೆ. ಏಷ್ಯಾ ಖಂಡದಾದ್ಯಂತ ರಕ್ಷಣಾ ವೆಚ್ಚ ಹೆಚ್ಚುತ್ತಿರುವುದು ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಮತ್ತು ಕೊರಿಯಾದಲ್ಲಿ ಅಂತಾರಾಷ್ಟ್ರೀಯ ಸಂಘರ್ಷ ಅಲ್ಲದೇ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಇದಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.