ರಕ್ಷಣಾ ಖರೀದಿಗೆ ಪ್ರತ್ಯೇಕ ವ್ಯವಸ್ಥೆ: ಪಾರಿಕ್ಕರ್
ಹೊಸದಿಲ್ಲಿ, ಫೆ.25: ರಕ್ಷಣಾ ಖರೀದಿಗಾಗಿ ಪ್ರತ್ಯೇಕ ವ್ಯವಸ್ಥೆಯೊಂದನ್ನು ರಚಿಸಲು ಸರಕಾರವು ‘ಸಕ್ರಿಯವಾಗಿ ಪರಿಶೀಲಿಸುತ್ತಿದೆ’ ಎಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಗುರುವಾರ ಹೇಳಿದ್ದಾರೆ. ಅದು ಜಾರಿಯಾದಲ್ಲಿ ಅದೊಂದು ಪ್ರಮುಖ ಉಪಕ್ರಮವಾಗಲಿದೆ.
ಫ್ರಾನ್ಸ್‌ನಂತಹ ಅನೇಕ ರಾಷ್ಟ್ರಗಳಲ್ಲಿ ರಕ್ಷಣಾ ಖರೀದಿಯನ್ನು ನಿಭಾಯಿಸಲು ಪ್ರತ್ಯೇಕ ಸಂಘಟನೆಗಳಿರುತ್ತವೆ. ಇದು ಸಹ ಧೀರೇಂದ್ರ ಸಿಂಗ್ ಸಮಿತಿಯ ಶಿಫಾರಸುಗಳಲ್ಲಿ ಸೇರಿದೆ. ರಕ್ಷಣಾ ಖರೀದಿ ಪ್ರಕ್ರಿಯೆಯಲ್ಲಿ ಬದಲಾವಣೆಗಳಿಗೆ ಸಲಹೆ ನೀಡುವುದಕ್ಕಾಗಿ ರಕ್ಷಣಾ ಸಚಿವಾಲಯ ಈ ಸಮಿತಿಯನ್ನು ರಚಿಸಿತ್ತು.
ಬಂಡವಾಳ ಹಾಗೂ ಆದಾಯ ಮಟ್ಟಗಳಲ್ಲಿ ರಕ್ಷಣಾ ಖರೀದಿಗೆ ಪ್ರತ್ಯೇಕ ವ್ಯವಸ್ಥೆ ಹಾಗೂ ಒಎಫ್‌ಬಿಗಳನ್ನು ಸೃಷ್ಟಿಸುವ ಅಗತ್ಯವಿದೆ. ಅದು ಗಟ್ಟಿಗೊಳ್ಳಬೇಕಾದರೆ ಇನ್ನೂ 6 ತಿಂಗಳು ಬೇಕಾಗಬಹುದೆಂದು ರಕ್ಷಣಾ ಸಂಶೋಧಕರು ಹಾಗೂ ಕೈಗಾರಿಕಾ ಸಂಘಟನೆಯ (ಡಿಐಐಎ) ಉದ್ಘಾಟನೆಯ ವೇಳೆ ಪಾರಿಕ್ಕರ್ ಹೇಳಿದರು.
ಈ ಸಿದ್ಧಾಂತವು ಸಕ್ರಿಯ ಪರಿಶೀಲನೆಯಲ್ಲಿದೆ. ಹಾಲಿ ಕ್ಯಾಲೆಂಡರ್‌ನ ಅವಧಿಯಲ್ಲಿ ಖಂಡಿತವಾಗಿಯೂ ಈ ವ್ಯವಸ್ಥೆ ಸ್ಥಾಪನೆಯಾಗಬೇಕು. ಮಾಹಿತಿ, ಜ್ಞ್ಞಾನ ಹಾಗೂ ಅನುಭವಗಳಲ್ಲಿ ಸಾತತ್ಯವಿರಬೇಕು ಎಂದವರು ತಿಳಿಸಿದರು.
ಅಧಕಾರಿಗಳಲ್ಲಿ ವೃತ್ತಿಪರತೆಯು ಹಂತಹಂತವಾಗಿ ಅಭಿವೃದ್ಧಿಯಾಗುವುದನ್ನು ಖಚಿತಪಡಿಸಲು ಕ್ರಮ ಕೈಗೊಳ್ಳಲಾಗುವುದು. ಇಷ್ಟು ಸಾಕು ಎನ್ನುವ ಭಾವನೆ ನುಸುಳದಂತೆ ಹಾಗೂ ಯಾವುದೇ ಸಂಭಾವ್ಯ ತಪ್ಪುಗಳನ್ನು ಮಾಡದಂತೆ ನೋಡಿಕೊಳ್ಳಲಾಗುವುದೆಂದು ಪಾರಿಕ್ಕರ್ ಹೇಳಿದರು.