×
Ad

ಸಿಬಿಐಯಲ್ಲಿ 1,650ಕ್ಕೂ ಹೆಚ್ಚು ಹುದ್ದೆ ತೆರವು: ಜಿತೇಂದ್ರ ಸಿಂಗ್

Update: 2016-02-25 23:36 IST

ಹೊಸದಿಲ್ಲಿ, ಫೆ.25: ವ್ಯಾಪಂ ಹಾಗೂ ಪಾಂಜಿ ಸ್ಕೀಂ ಹಗರಣಗಳಂತಹ ಸೂಕ್ಷ್ಮ ಪ್ರಕರಣಗಳ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖೆ ಸಂಸ್ಥೆಯಲ್ಲಿ (ಸಿಬಿಐ) ವಿವಿಧ ಹಂತಗಳ 1,650ಕ್ಕೂ ಹೆಚ್ಚು ಹುದ್ದೆಗಳು ತೆರವಾಗಿವೆಯೆಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇಂದು ತಿಳಿಸಿದ್ದಾರೆ.

  ವಿವಿಧ ಸಾಂವಿಧಾನಿಕ ನ್ಯಾಯಾಲಯಗಳು ಕಾಲಕಾಲಕ್ಕೆ ತನಿಖೆಗಾಗಿ ಪ್ರಕರಣಗಳನ್ನು ಸಿಬಿಐಗೆ ನೀಡುತ್ತಿರುತ್ತವೆ. ಕೆಲವು ಸಲ ಅದು ಸಿಬ್ಬಂದಿ ಕೊರತೆಯಿಂದಾಗಿ ಪ್ರಕರಣಗಳ ತನಿಖೆ ಸಾಧ್ಯವಾಗದೆಂದು ಸುಪ್ರೀಂಕೋರ್ಟ್ ಸಹಿತ ನ್ಯಾಯಾಲಯಗಳಿಗೆ ಮಾಹಿತಿ ನೀಡುತ್ತದೆಯೆಂದು ಅವರು ಹೇಳಿದ್ದಾರೆ.
2016 ಫೆ.2ಕ್ಕೆ ಅನ್ವಯವಾಗುವಂತೆ ಸಿಬಿಐಗೆ ಮಂಜೂರಾಗಿರುವ ಸಿಬ್ಬಂದಿ ಸಂಖ್ಯೆ 7,274 ಇದ್ದರೆ, 1,656 ಹುದ್ದೆಗಳು ತೆರವಾಗಿವೆಯೆಂದು ಸಿಂಗ್ ರಾಜ್ಯಸಭೆಗೆ ನೀಡುರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಇನ್ನೊಂದು ಉತ್ತರದಲ್ಲಿ ಅವರು, ಮಾನವ ಸಂಪನ್ಮೂಲದ ಕೊರತೆ ಅಥವಾ ನಿಷ್ಠ ಸೇವೆಯ ಅಭಾವದಿಂದ ತನಿಖೆಯ ಗುಣಮಟ್ಟದ ಮೇಲೆ ದುಷ್ಪರಿಣಾಮವಾಗಿಲ್ಲ. ಆದಾಗ್ಯೂ, ಸಿಬ್ಬಂದಿ ಕೊರತೆಯಿಂದ ತನಿಖೆ ಹಾಗೂ ಇತರ ಕ್ರಮಗಳ ಮುಕ್ತಾಯ ವಿಳಂಬವಾಗಬಹುದೆಂದು ಹೇಳಿದ್ದಾರೆ.
ಹುದ್ದೆಗಳು ತೆರವಾಗುವುದು ಹಾಗೂ ಅವುಗಳನ್ನು ತುಂಬಿಸುವುದು ಸತತ ಪ್ರಕ್ರಿಯೆಗಳಾಗಿರುತ್ತವೆ. ನೇಮಕಾತಿ, ಭಡ್ತಿ, ನಿವೃತ್ತಿ, ಹಾಗೂ ಮಾತೃ ಸಂಸ್ಥೆಗೆ ಮರಳುವಿಕೆಗಳನ್ನವಲಂಬಿಸಿ ಸಿಬ್ಬಂದಿ ಸಂಖ್ಯೆಯಲ್ಲಿ ಬದಲಾವಣೆಯಾಗುತ್ತಲೇ ಇರುತ್ತವೆಯೆಂದು ಸಚಿವರು ತಿಳಿಸಿದ್ದಾರೆ.
ತೆರವಾಗಿರುವ ಹುದ್ದೆಗಳನ್ನು ತುಂಬಿಸುವುದು ಸರಕಾರ ಹಾಗೂ ಸಿಬಿಐಗಳ ಗುರಿಯಾಗಿದೆ. ಇತ್ತೀಚೆಗೆ ವ್ಯಾಪಂ ಹಾಗೂ ಚಿಟ್ ಫಂಡ್ (ಪಾಂಜಿ) ಹಗರಣಗಳ ತನಿಖೆಗಾಗಿ ಕೇಂದ್ರ ಸರಕಾರ ಸಿಬಿಐಗೆ 598 ಹೊಸ ಹುದ್ದೆಗಳನ್ನು ಮಂಜೂರು ಮಾಡಿದೆಯೆಂದು ಸಿಬ್ಬಂದಿ ಸಹಾಯಕ ಸಚಿವ ಸಿಂಗ್ ಹೇಳಿದ್ದಾರೆ.
149 ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ಇನ್‌ಸ್ಪೆಕ್ಟರ್‌ಗಳಾಗಿ ಭಡ್ತಿ ನೀಡಲು ಅರ್ಹತಾ ಮಾನದಂಡ ಸಡಿಲಿಕೆಗೆ ಸಂಬಂಧಿಸಿದ ಸಿಬಿಐಯ ಪ್ರಸ್ತಾಪಕ್ಕೆ ಅನುಮೋದನೆ ನೀಡುವುದು ಸೇರಿದಂತೆ , ಹಲವಾರು ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಂಡಿದೆಯೆಂದು ಅವರು ತಿಳಿಸಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News