ರೈಲ್ವೆ ಬಜೆಟ್ 2016-17: ಅನಿಸಿಕೆಗಳು
ಮಂಗಳೂರು, ಫೆ.25: ಈ ಬಾರಿಯ ಕೇಂದ್ರ ರೈಲ್ವೆ ಬಜೆಟ್‌ಗೆ ಸಂಬಂಧಿಸಿದಂತೆ ಕರಾವಳಿಯ ಜನರು ತಮ್ಮ ನಿರೀಕ್ಷೆಯನ್ನು ಹಾಗೂ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಯೋಜನೆಗಳನ್ನು ಗಮನಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯವಾಗಿ ಕರಾವಳಿ ಜನರ ಮಂಗಳೂರು ಪ್ರತ್ಯೇಕ ರೈಲು ವಿಭಾಗದ ಬೇಡಿಕೆ ಈ ಬಾರಿಯ ಬಜೆಟ್‌ನಲ್ಲೂ ಈಡೇರಿಲ್ಲ. ಅಂತಾರಾಷ್ಟ್ರೀಯ ರೈಲು ನಿಲ್ದಾಣವಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಅಭಿವೃದ್ಧಿಯ ಬಗ್ಗೆ ಸ್ಪಷ್ಟವಾದ ಯೋಜನೆಗಳು ಪ್ರಕಟಗೊಳ್ಳದೆ ಇರುವುದು ಜನರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಬಜೆಟ್ ಬಗ್ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿಲ್ಲ. ಬಜೆಟ್ ಬಗ್ಗೆ ಜಿಲ್ಲೆಯ ಪ್ರಮುಖರು ಪಕ್ಷದ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಈ ಕೆಳಗಿನಂತೆ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಮುಂಗಡಪತ್ರದಲ್ಲಿ ದೇಶದ ಪ್ರಗತಿಯ ಚಿಂತನೆ ಮೂಡಿದೆ. ಹೊಸ ಯೋಜನೆಗಳ ಅನುಷ್ಠಾನ, ಲಾಭದಿಂದ ಅಭಿವೃದ್ಧಿಯತ್ತ ಎಂಬ ಚಿಂತನೆಯಲ್ಲಿ ಬಜೆಟ್ ಮೂಡಿಬಂದಿದೆ. ಕರಾವಳಿ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನೇತ್ರಾವತಿ ಮಂಗಳೂರು ಜಂಕ್ಷನ್ ಡಬ್ಲಿಂಗ್‌ಗೆ 18 ಕೋಟಿ ರೂ., ಸಕಲೇಶಪುರ ಸುಬ್ರಹ್ಮಣ್ಯ ಡಬ್ಲಿಂಗ್‌ಗೆ 500 ಕೋಟಿ ರೂ., ಸೋಲಾಪುರ, ಸಕಲೇಶಪುರ ಆರ್ಯುಬಿಗೆ ಹಣವನ್ನು ಮೀಸಲಿಡಲಾಗಿದೆ. ಬಜೆಟ್ ಚರ್ಚೆಯ ನಂತರ ಬೆಂಗಳೂರು-ಮಂಗಳೂರು ಹೊಸ ರೈಲು ಕಾರ್ಯಗತಗೊಳ್ಳಲಿದೆ ಎಂಬ ನಿರೀಕ್ಷೆಯಿದೆ.
-ನಳಿನ್‌ಕುಮಾರ್ ಕಟೀಲ್, ಸಂಸದರು, ಮಂಗಳೂರು
ಕೇಂದ್ರ ಸರಕಾರ ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟಂತೆ ಯಾವುದೇ ಬೇಡಿಕೆಗಳು ಕಾರ್ಯಗತವಾಗಿಲ್ಲ. ಬೆಂಗಳೂರು-ಮಂಗಳೂರು ನಡುವೆ ತಡ ರಾತ್ರಿ ಫಾಸ್ಟ್‌ರೈಲು ಬೇಕೆಂಬ ಬೇಡಿಕೆ ನಮ್ಮದಾಗಿತ್ತು. ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಬಜೆಟ್‌ನ ಆಶಾದಾಯಕ ಬೆಳವಣಿಗೆಯೆಂದರೆ ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಲೋವರ್ ಬರ್ತ್‌ನಲ್ಲಿ ಶೇ.50 ಮೀಸಲಿಟ್ಟಿರುವುದು. ಬುಲೆಟ್ ರೈಲು ಓಡಿಸುವುದಕ್ಕಿಂತ ಸ್ಥಳೀಯ ರೈಲುಗಳನ್ನು ಓಡಿಸಿದರೆ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಹೊಸ ರೈಲು, ಹೊಸ ಯೋಜನೆ ಗಳಿಲ್ಲದೆ ಇರುವ ಬಜೆಟ್ ಇದಾಗಿದೆ.
-ಅಹ್ಮದ್ ಬಾವ, ಸದಸ್ಯರು, ಡಿವಿಸನ್ ರೈಲ್ವೆ ಯೂಸರ್ ಕನ್ಸಲ್ಟೇಷನ್ ಕಮಿಟಿ.
ರೈಲ್ವೆ ಬಜೆಟ್‌ನಿಂದ ನಮ್ಮ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಮಂಗಳೂರು ರೈಲ್ವೆ ನಿಲ್ದಾಣವನ್ನು ವಿಶ್ವದರ್ಜೆ ರೈಲು ನಿಲ್ದಾಣವಾಗಿ ಘೋಷಣೆ ಮಾಡುವ ನಿರೀಕ್ಷೆ ಈಡೇರಿಲ್ಲ. ಬೆಂಗಳೂರು-ಮಂಗಳೂರು ರೈಲಿನ ಸಮಯವನ್ನು 14 ಗಂಟೆಯಿಂದ 8 ಗಂಟೆಗೆ ಇಳಿಸುವ ಬೇಡಿಕೆ ಸೇರಿದಂತೆ ಕರ್ನಾಟಕವನ್ನು ರೈಲ್ವೆ ಸ್ನೇಹಿ ಮಾಡಲು ಇಟ್ಟ ಬೇಡಿಕೆಗಳು ಈಡೇರಿಲ್ಲ. ನಮ್ಮ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗಿದೆ.
-ಐವನ್ ಡಿಸೋಜ, ವಿಧಾನಪರಿಷತ್ ಸದಸ್ಯರು.