ಅಧ್ಯಯನದಿಂದ ಪರಿವರ್ತನೆ ಸಾಧ್ಯ: ಕಿಮ್ಮನೆ ರತ್ನಾಕರ್

Update: 2016-02-26 18:28 GMT

ಗ್ರಂಥಾಲಯ ಮೇಲ್ವಿಚಾರಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ


ಉಡುಪಿ, ಫೆ.26: ಅಧ್ಯಯನ ನಮ್ಮ ವ್ಯಕ್ತಿತ್ವ ವಿಕಸನಕ್ಕೆ, ಪರಿವರ್ತನೆಗೆ ಸಾಧನ. ನಮ್ಮ ಗ್ರಂಥಾಲಯಗಳು ಇಂತಹ ಪರಿವರ್ತಕಗಳಾಗಬೇಕು. ಓದುಗರನ್ನು ಬೆಳೆಸುವಂತಾಗಬೇಕು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಗ್ರಂಥಾಲಯ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆ, ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾ ಲಯದ ಸಹಯೋಗದಲ್ಲಿ ಮಣಿಪಾಲ ರಜತಾದ್ರಿಯಲ್ಲಿರುವ ಉಡುಪಿ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ಗ್ರಂಥಾಲಯ ಮೇಲ್ವಿಚಾರಕರ ಎರಡು ದಿನಗಳ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಗ್ರಂಥಾಲಯದ ಪರಿಕಲ್ಪನೆ ಇಂದು ಬದಲಾಗಿದೆ. ಕಟ್ಟಡಗಳು, ಅದರೊಳಗೆ ತುಂಬಿದ ಪುಸ್ತಕಗಳಿಂದ ಅಳೆಯುವ ಬದಲು ಸಣ್ಣ ಸಿಡಿ ಹಾಗೂ ಕಂಪ್ಯೂ ಟರ್ ತಂತ್ರಜ್ಞಾನದೊಳಗೆ ಪುಟಗಟ್ಟಲೆ ಪುಸ್ತಕಗಳನ್ನು ಓದಲು ಅವಕಾಶ ಮಾಡಿಕೊಡಲಾಗಿದೆ. ಡಿಜಿಟ ಲೀಕರಣದಿಂದ ಗ್ರಂಥಾಲಯ ಪರಿಕಲ್ಪನೆ ಸಂಪೂರ್ಣ ಬದಲಾಗಿದ್ದು, ಗ್ರಂಥಾಲಯಾಧಿಕಾರಿಗಳ ಹೊಣೆಯೂ ಹೆಚ್ಚಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಅಧ್ಯಕ್ಷತೆ ವಹಿಸಿದ್ದರು.

ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲ ಯಾಧಿಕಾರಿ ವೆಂಕಟೇಶ್ ಸಿ.ಜೆ. ಸ್ವಾಗತಿಸಿದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ವಂದಿಸಿದರು. ಸಹ ಗ್ರಂಥಪಾಲಕಿ ಪ್ರಣಿತ ಪ್ರಿಯಾ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು.


ತಾತ್ವಿಕ ಜ್ಞಾನ ಬೆಳೆಸುವ ಕೇಂದ್ರ ಗಳಾಗಿ ಗ್ರಂಥಾಲಯಗಳು ಬೆಳೆ ಯಬೇಕು. ಯಾಂತ್ರಿಕವಾಗಿ ಇಂತಹ ಕೆಲಸಗಳನ್ನು ನಿರ್ವಹಿಸಿದರೆ ಪ್ರತಿಫಲ ನಿರೀಕ್ಷೆಯ ಮಟ್ಟಕ್ಕೇರುವುದಿಲ್ಲ. ಪ್ರಪಂಚದ ಎಲ್ಲ ಬದಲಾವಣೆಗಳಲ್ಲಿ ಸಾಹಿತ್ಯದ ಕೊಡುಗೆ ಇದೆ. ಎಲ್ಲ ಆವಿಷ್ಕಾರದ ತಾಯಿ ಓದು. ಸಮಾಜಮುಖಿ ಶಿಕ್ಷಣ ಮತ್ತು ಓದು ಉತ್ತಮ ಸಮಾಜದ ಸೃಷ್ಟಿಗೆ ಕಾರಣವಾಗುತ್ತದೆ.
                    -ಕಿಮ್ಮನೆ ರತ್ನಾಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News