ಎಂಐಟಿ ವಿದ್ಯಾರ್ಥಿಗಳಿಂದ ಪರಿಸರಸ್ನೇಹಿ ರೋಬೊಟ್ ನಿರ್ಮಾಣ

Update: 2016-02-26 18:29 GMT

ಮಣಿಪಾಲ, ಫೆ.26: ಮುಂದಿನ ತಿಂಗಳು ಪುಣೆಯ ಬಾಲೆವಾಡಿ ಸ್ಟೇಡಿಯಂನಲ್ಲಿ ನಡೆಯುವ ‘ರೋಬೋ ಕಾನ್-16’ ರೋಬೊಟ್‌ಗಳ ರಾಷ್ಟ್ರೀಯ ಸ್ಪರ್ಧೆಗಾಗಿ ಮಣಿಪಾಲ ಎಂಐಟಿಯ ವಿದ್ಯಾರ್ಥಿಗಳು ಪರಿಸರಸ್ನೇಹಿ ರೋಬೋಟ್‌ನ್ನು ನಿರ್ಮಿಸಿದ್ದಾರೆ. ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 33 ವಿದ್ಯಾರ್ಥಿಗಳ ತಂಡ ‘ರೋಬೊ ಮಣಿಪಾಲ್’ ವಿನ್ಯಾಸ ಗೊಳಿಸಿ ನಿರ್ಮಿಸಿದ ಈ ರೋಬೊಟ್‌ನ್ನು ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಇಂದು ಸಂಜೆ ಎಂಐಟಿ ಕ್ಯಾಂಪಸ್‌ನ ಅಟೋಮೊಬೈಲ್ ಲ್ಯಾಬ್‌ನಲ್ಲಿ ಅನಾವರಣಗೊಳಿಸಿದರು.

ಎಂಐಟಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ 6ನೆ ಸೆಮಿಸ್ಟರ್‌ನ ಸತೀಶ್ ರೆಡ್ಡಿ ನೇತೃತ್ವದ ತಂಡ 7ರಿಂದ 8 ತಿಂಗಳ ಪರಿಶ್ರಮದಿಂದ ಈ ರೋಬೊಟ್‌ನ್ನು ನಿರ್ಮಿಸಿದೆ. ಈ ತಂಡದಲ್ಲಿ ಐವರು ವಿದ್ಯಾರ್ಥಿನಿಯರು ಸೇರಿದ್ದಾರೆ.
ಮಾ.3ರಿಂದ 5ರವರೆಗೆ ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ರೋಬೊಕಾನ್-16 ಸ್ಪರ್ಧೆಯಲ್ಲಿ ಈ ತಂಡ ದೇಶದ ನಾನಾ ಭಾಗಗಳಿಂದ ಆಗಮಿಸುವ 120 ತಂಡಗಳೊಂ ದಿಗೆ ಸ್ಪರ್ಧಿಸಲಿದೆ. ಈ ಸ್ಪರ್ಧೆಯಲ್ಲಿ ದೇಶದ ಐಐಟಿ ಹಾಗೂ ಎನ್‌ಐಟಿಗಳ ವಿದ್ಯಾರ್ಥಿ ತಂಡಗಳೂ ಪಾಲ್ಗೊಳ್ಳಲಿವೆ. ಸ್ಪರ್ಧೆಯ ಕೊನೆಯಲ್ಲಿ ಅತ್ಯುತ್ತಮ ರೋಬೊಟ್ ಎಂದು ಆಯ್ಕೆಯಾಗುವ ಒಂದು ರೋಬೊಟ್, ಥಾಯ್‌ಲ್ಯಾಂಡ್‌ನಲ್ಲಿ ನಡೆಯುವ ಏಷ್ಯಾ-ಪೆಸಿಫಿಕ್ ವಲಯದ ‘ಅಬು ರೋಬೋಕಾನ್’ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆಯಲಿದೆ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.
ತಮ್ಮ ತಂಡ ಅಂತಾರಾಷ್ಟ್ರೀಯ ಮಟ್ಟಕ್ಕೆ ತೇರ್ಗಡೆಗೊಳ್ಳಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ರೋಬೊಟ್ ಅನಾವರಣದ ಬಳಿಕ ರೋಬೊ ಮಣಿಪಾಲ ತಂಡವು ತಾನು ನಿರ್ಮಿಸಿದ ರೋಬೊಟ್‌ನ ಪ್ರಾತ್ಯಕ್ಷಿಕೆಯನ್ನು ನೀಡಿತು.
ಈ ಬಾರಿಯ ಅಂತಾರಾಷ್ಟ್ರೀಯ ಸ್ಪರ್ಧೆಯ ಧ್ಯೇಯವಾಕ್ಯ ‘ಶುದ್ಧ ಇಂಧನ ವಿಶ್ವವನ್ನು ಬೆಳಗಲಿ’ ಎಂಬುದಾಗಿದ್ದು, ಅದಕ್ಕೆ ತಕ್ಕಂತೆ ರೋಬೊಟ್‌ನ್ನು ನಿರ್ಮಿಸಬೇಕಿದೆ. ರೋಬೊ ಮಣಿಪಾಲ ಇದಕ್ಕಾಗಿ ಎರಡು ರೋಬೊಟ್‌ಗಳನ್ನು ನಿರ್ಮಿ ಸಿದ್ದು, ಒಂದು ಯಾಂತ್ರಿಕವಾಗಿ ನಿರ್ಮಿಸಲಾದ ಪ್ರಧಾನ ‘ಹೈಬ್ರಿಡ್ ರೋಬೊಟ್’, ಇನ್ನೊಂದು ಇದರಿಂದ ವೈರ್‌ಲೆಸ್ ಆಗಿ ಗಾಳಿ ಇಂಧನವನ್ನು ಪಡೆದು ಸ್ವಯಂಚಾಲಿತವಾಗಿ ಕಾರ್ಯಾಚರಿಸುವ ‘ಇಕೋ ರೋಬೊಟ್’. ಹೈಬ್ರಿಡ್ ರೋಬೊನಲ್ಲಿರುವ ಇಡಿಎಸ್ ಮೂಲಕ ಉತ್ಪಾದನೆಯಾದ ಗಾಳಿ ಇಂಧನದಿಂದ ಶಕ್ತಿಯನ್ನು ಪಡೆಯುವ ಇಕೋ ರೋಬೊಟ್, ಸ್ವಯಂಚಾಲಿತವಾಗಿ ತನ್ನಲ್ಲಿರುವ ವಿಶೇಷ ಕೆಮರಾದ ಸಹಾಯದಿಂದ ಏರು-ತಗ್ಗುಗಳನ್ನು ನಿರಾಯಾಸ ವಾಗಿ ಕ್ರಮಿಸಿ ಗಮ್ಯಸ್ಥಾನವನ್ನು ಸೇರುವ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳು ತೋರಿಸಿದರು. ತನ್ನಲ್ಲಿ ಯಾವುದೇ ಇಂಧನ ಇಲ್ಲದಿದ್ದರೂ, ಹೈಬ್ರಿಡ್ ರೋಬೊನಿಂದ ಶುದ್ಧವಾದ ಗಾಳಿ ಇಂಧನ (ವಿಂಡ್ ಎನರ್ಜಿ) ಪಡೆದು ಕಾರ್ಯಾಚರಿಸುವ ಇಕೋ ರೋಬೊಟ್, ಪರಿಸರ ಸ್ನೇಹಿಯಾಗಿದೆ ಎಂದು ಸತೀಶ್ ರೆಡ್ಡಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News