ಫೆ.29ರಿಂದ ಸಫಾಯಿ ಕರ್ಮಚಾರಿಗಳ ಸಮೀಕ್ಷೆ: ಜಿಲ್ಲಾಧಿಕಾರಿ
ಮಂಗಳೂರು, ಫೆ. 27: ಒಣ ಶೌಚಾಲಯಗಳ ನಿರ್ಮೂಲನೆ ಹಾಗೂ ಮನುಷ್ಯನ ಮಲವನ್ನು ದೈಹಿಕ ಶ್ರಮದಿಂದ ಸ್ವಚ್ಛಗೊಳಿಸುವ ವೃತ್ತಿಯನ್ನು ತೊಡೆದುಹಾಕಿ ಸಫಾಯಿ ಕರ್ಮಚಾರಿಗಳಿಗೆ ಪರ್ಯಾಯ ಉದ್ಯೋಗ ಹಾಗೂ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ಫೆ. 29ರಿಂದ ಮಾರ್ಚ್ 12ರವರೆಗೆ ಸಫಾಯಿ ಕರ್ಮಚಾರಿಗಳ ಸಮೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸೂಚನೆ ಮೇರೆಗೆ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವತಿಯಿಂದ ಈ ಸಮೀಕ್ಷೆ ನಡೆಯಲಿದೆ ಎಂದರು.
ಸಮೀಕ್ಷೆ ಬಳಿಕ ಮಾ. 14ರಿಂದ 19ರವರೆಗೆ ಗ್ರಾಮಸಭೆಗಳನ್ನು ಏರ್ಪಡಿಸಿ, ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಗ್ರಾಮೀಣ ಸಫಾಯಿ ಕರ್ಮಚಾರಿಗಳ ಭರ್ತಿ ಮಾಡಿದ ಸಮೀಕ್ಷೆಯ ನಮೂನೆಗಳನ್ನು ಶಿಫಾರಸ್ಸಿನೊಂದಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ರವಾನಿಸಲಾಗುವುದು. ಮಾ. 21ರಿಂದ 26ರವರೆಗೆ ಸಮೀಕ್ಷೆ ನಮೂನೆಗಳ್ನು ಜಿಲ್ಲಾಧಿಕಾರಿ ಅನುಮೋದನೆಗೆ ಕಳುಹಿಸುವರು. ಬಳಿಕ ಎಪ್ರಿಲ್ 4ರಿಂದ 13ರವರೆಗೆ ಸಮೀಕ್ಷಾ ವರದಿಯನ್ನು ಗಣಕೀಕರಣಗೊಳಿಸುವ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಸಫಾಯಿ ಕರ್ಮಚಾರಿಗಳನ್ನು ಹೇಗೆ ಗುರುತಿಸಲಾಗುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಅಧಿಕಾರಿ ಡಾ. ಸಂತೋಷ್ ಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮಾರ್ಗಸೂಚಿ ಪ್ರಕಾರ ಚರಂಡಿ/ಬೀದಿಯಲ್ಲಿ ಕುಡಿಸುವವರು ಸಫಾಯಿ ಕರ್ಮಚಾರಿ ಎಂದು ಪರಿಗಣಿಸಲಾಗುವುದಿಲ್ಲ. ದಿನನಿತ್ಯ ಶೌಚಾಲಯವ್ನ ತೆಳೆಯುವವರೂ ಸಫಾಯಿ ಕರ್ಮಚಾರಿಗಳು ಅಲ್ಲ ಎಂದು ವ್ಯಾಖ್ಯಾನಿಸಲಾಗಿದೆ ಎಂದರು.
ರೈಲ್ವೆ ಹಳಿಗಳಲ್ಲಿ ಮಲ ಸ್ವಚ್ಛ ಮಾಡುವವರು ಸಫಾಯಿ ಕರ್ಮಚಾರಿಗಳಾಗಿ ಪರಿಗಣಿಸಲ್ಪಡುತ್ತಾರೆ. ಈ ಹಿಂದೆ ಸಫಾಯಿ ಕರ್ಮಚಾರಿಗಳಾಗಿದ್ದು, ಪ್ರಸ್ತುತ ಆ ವೃತ್ತಿ ಮಾಡದವರು ಸಫಾಯಿ ಕರ್ಮಚಾರಿಗಳಲ್ಲ. ಪ್ರಸ್ತುತ ಬೇರೆ ಉದ್ಯೋಗದಲ್ಲಿದ್ದರೂ ಯಾವಾಗಲಾದರೂ ಸಫಾಯಿ ಕರ್ಮಚಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಅವರನು ಪರಿಗಣಿಸಬಹುದು. ಒಂದು ಕುಟಂಬದಲ್ಲಿ ಒಂದಕ್ಕಿಂತ ಹೆಚ್ಚು ಸಫಾಯಿ ಕರ್ಮಚಾರಿಗಳಿದ್ದರೂ ಪ್ರತಿಯೊಬ್ಬರಿಗೂ ಪ್ರತ್ಯೇಕ ನಮೂನೆ ಭರ್ತಿ ಮಾಡಬೇಕು. ಕೆಲವು ಗ್ರಾಮೀಣ ಭಾಗದಲ್ಲಿ ಮಲ ವಿಸರ್ಜನೆ ಮಾಡಲು ಪ್ರತ್ಯೇಕ ಸ್ಥಳ ನಿಗದಿಯಾಗಿರುತ್ತದೆ. ಅಂತಹ ಸ್ಥಳಗಳಲ್ಲಿ ಮಲ ಸ್ವಚ್ಛ ಮಾಡುವವರನ್ನು ಸಫಾಯಿ ಕರ್ಮಚಾರಿ ಎಂದು ಪರಿಗಣಿಸಬೇಕು. ಶೌಚಾಲಯ ಗುಂಡಿ, ಒಳಚರಂಡಿಗಳಲ್ಲಿ ನಿಗದಿತ ರಕ್ಷಣಾ ಸಾಮಗ್ರಿ ಉಪಯೋಗಿಸದೆ ಮಲ ಸ್ವಚ್ಛಗೊಳಿಸುವವರನ್ನು ಸಫಾಯಿ ಕರ್ಮಚಾರಿಗಳೆಂದು ಪರಿಗಣಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದರು.
2015ರ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 634 ಸಫಾಯಿ ಕರ್ಮಚಾರಿಗಳು
2011ರಲ್ಲಿ ನಡೆದ ಸಮೀಕ್ಷೆಯಲ್ಲಿ ದ.ಕ. ಜಿಲ್ಲೆಯಲ್ಲಿ 123 ಸಫಾಯಿ ಕರ್ಮಚಾರಿಗಳನ್ನು ಗುರುತಿಸಲಾಗಿದ್ದರೆ, 2015ರ ಸಮೀಕ್ಷೆಯಲ್ಲಿ 634 ಸಫಾಯಿ ಕರ್ಮಚಾರಿಗಳಿರುವುದು ದಾಖಲಾಗಿದೆ. ಅದರಂತೆ ಮಂಗಳೂರಿನಲ್ಲಿ 56, ಬಂಟ್ವಾಳ- 261, ಪುತ್ತೂರು 36, ಬೆಳ್ತಂಗಡಿ 222 ಹಾಗೂ ಸುಳ್ಯದಲ್ಲಿ 19 ಮಂದಿ ಸಫಾಯಿ ಕರ್ಮಚಾರಿಗಳಿದ್ದರು ಎಂದು ಡಾ. ಸಂತೋಷ್ ಕುಮಾರ್ ತಿಳಿಸಿದರು.
ಗೋಷ್ಠಿಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಉಪಸ್ಥಿತರಿದ್ದರು.