×
Ad

ಸಮಸ್ತದ ಪ್ರಧಾನ ಕಾರ್ಯದರ್ಶಿಯಾಗಿ ಪ್ರೊ. ಆಲಿಕುಟ್ಟಿ ಉಸ್ತಾದ್ ಆಯ್ಕೆ

Update: 2016-02-27 14:20 IST

ಮಲಪ್ಪುರಂ: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ನೂತನ ಪ್ರದಾನ ಕಾರ್ಯದರ್ಶಿಯಾಗಿ ಹಿರಿಯ ಧಾರ್ಮಿಕ ವಿದ್ವಾಂಸರೂ, ಕಾಸರಗೋಡ್ ಸಂಯುಕ್ತ ಖಾಝಿಯೂ ಆಗಿರುವ ಶೈಖುಲ್ ಜಾಮಿಯಾ ಪ್ರೊ.ಆಲಿಕುಟ್ಟಿ ಮುಸ್ಲಿಯಾರ್ ಅವರು ಆಯ್ಕೆಯಾಗಿದ್ದಾರೆ.

ಶನಿವಾರ ನಡೆದ ಸಮಸ್ತ ಕೇಂದ್ರ ಮುಶಾವರ ಸಭೆಯಲ್ಲಿ ಆಯ್ಕೆ ಸಮಸ್ತದ ಉಪಾಧ್ಯಕ್ಷರಾಗಿರುವ ಸೈಯದ್ ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ ಆಲಿಕುಟ್ಟಿ ಉಸ್ತಾದರ ಹೆಸರನ್ನು ಘೋಷಣೆ ಮಾಡಿದರು. ಶೈಖುನಾ ಝೈನುಲ್ ಉಲಮಾ ಚೆರುಶ್ಶೇರಿ ಝೈನುದ್ದೀನ್ ಮುಸ್ಲಿಯಾರರ ವಿಯೋಗದಿಂದ ತೆರವಾಗಿದ ಸ್ಥಾನಕ್ಕೆ ಆಲಿಕುಟ್ಟಿ ಉಸ್ತಾದರು ನೇಮಕಗೊಂಡಿದ್ದಾರೆ.

ಅಲ್ಲದೆ ಕೊಯ್ಯೋಡ್ ಉಮ್ಮರ್ ಮುಸ್ಲಿಯಾರ್ ಸಮಸ್ತದ ಜೊತೆ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗಿದ್ದಾರೆ. 
ಶೈಖುನಾ ಆಲಿಕುಟ್ಟಿ ಉಸ್ತಾದರ ಪರಿಚಯ: ಉಸ್ತಾದರು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಕೇಂದ್ರ ಮುಶಾವರ ಸಮಿತಿಯ ಹಾಲಿ ಸದಸ್ಯರೂ ಜೊತೆ ಕಾರ್ಯದರ್ಶಿಯಾಗಿಯೂ ಆಗಿದ್ದರು. ಅಲ್ಲದೆ ಅಖಿಲ ಭಾರತ ಮುಸ್ಲಿ ಪರ್ಸನಲ್ ಲೋ ಬೋರ್ಡಿನ ಸದಸ್ಯರಾಗಿಯೂ, ರಾಬಿಯತುಲ್ ಆಲಮೀನ್ ಇಸ್ಲಾಮಿ ಅಧೀನಲ್ಲಿ ಜಿದ್ದಾ ಕೇಂದ್ರಾಸ್ಥಾನವಾಗಿ ಕಾರ್ಯನಿರ್ವಹಿಸುತ್ತಿರುವ ಇಂಟರ್‌ನ್ಯಾಶನಲ್ ಫಿಕ್ಹ್ ಕೌನ್ಸಿಲ್‌ನ ಸದಸ್ಯರೂ, ಪಟ್ಟಿಕ್ಕಾಡ್ ಜಾಮಿಆ ನೂರಿಯಾದ ಅರಬಿಕ್ ಕಾಲೇಜಿನ ಪ್ರಿನ್ಸಿಪಾಲರೂ, ಕಾಸರಗೋಡಿನ ಖಾಝಿಯೂ, ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಉಪಾಧ್ಯಕ್ಷರೂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
2003ರಿಂದ 2006ರವರೆಗೆ ಕೇಂದ್ರ ಹಜ್ಜ್ ಕಮಿಟಿಯ ಚೇರ್‌ಮ್ಯಾನ್ ಆಗಿಯೂ, 2006ರಿಂದ ವೈಸ್ ಚೇರ್‌ಮ್ಯಾನ್ ಆಗಿಯೂ ಸೇವೆಗೈಯುತ್ತಿದ್ದಾರೆ. ವೆಟ್ಟತ್ತೂರ್ ಅನ್ವರುಲ್ ಹುದಾ ಇಸ್ಲಾಮಿಕ್ ಕಾಂಪ್ಲೆಕ್ ಪ್ರಧಾನ ಕಾರ್ಯದರ್ಶಿಯಾಗಿ, ಪೊನ್ನಾಣಿ ಮುಹೀತುಲ್ ಇಸ್ಲಾಮಿಕ್ ಅರಬಿಕ್ ಕಾಲೇಜಿನ ಅಧ್ಯಕ್ಷರಾಗಿಯೂ, ವಡಗರ ಹುಜ್ಜತುಲ್ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಅಧ್ಯಕ್ಷರಾಗಿಯೂ, ಕಾಸರಗೋಡಿನ ಮಾಲಿಕುದ್ದಿನಾರ್ ಇಸ್ಲಾಮಿಕ್ ಅಕಾಡೆಮಿಯ ಮೇಲುಸ್ತುವಾರಿಯಾಗಿಯೂ ಶೈಖುನಾ ಆಲಿಕುಟ್ಟಿ ಉಸ್ತಾದರು ಕಾರ್ಯನಿರ್ವಹಿಸುತ್ತಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷ ಪ್ರತಿಭೆಯನ್ನು ಹೊಂದಿರುವ ಉಸ್ತಾದರು, ಸುನ್ನಿ ಯುವಜನ ಸಂಘದ ಮುಖವಾಣಿಯಾಗಿರುವ 'ಸುನ್ನಿ ಅಫ್ಕಾರ್', ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್‌ನ ವತಿಯಿಂದ ಪ್ರಕಟವಾಗುತ್ತಿರುವ ’ಅಲ್ ಮುಅಲ್ಲಿಮ್’ ಮಾಸಿಕ, 'ಅನ್ನೂರ್' ಎಂಬ ಅರಬಿಕ್ ಮಾಸಿಕ, ತಿರುರಂಙಡಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ಡಾಟಾನೆಟ್ ಫಾರ್ ಇಸ್ಲಾಮಿಕ್ ಪ್ರೆಪಗೇಶನ್ ಹೊರತರುತ್ತಿರುವ 'ಮುಸ್ಲಿಂ ವರ್ಲ್ಡ್ ಇಯರ್ ಬುಕ್' ಮುಂತಾದ ನಾಲ್ಕರಷ್ಟು ಪ್ರಕಟನೆಗಳ ಮುಖ್ಯ ಪತ್ರಿಕೋದ್ಯಮಿಯಾಗಿಯೂ ಸೇವೆಗೈಯುತ್ತಿದ್ದಾರೆ. ಕೇರಳ ಮುಸ್ಲಿಂ ಡಾಟಾ ಬ್ಯಾಂಕ್ ವೆಬ್ ಪೋರ್ಟಲ್‌ನ ಪ್ರಧಾನ ಸಂಪಾದಕರೂ ಆಗಿದ್ದಾರೆ. 'ಆಗೋಲತಲತ್ತಿಲ್ ಇಸ್ಲಾಮಿನ ಮುನ್ನೇಟಂ', 'ಪುಣ್ಯ ಭೂಮಿಲೇಕ್' ಪುಸ್ತಕಗಳು ಹಾಗೂ ಹಜ್ಜ್ ಕುರಿತಾದ ಮೂರರಷ್ಟು ಪುಸ್ತಕಗಳನ್ನು ಬರೆದಿದ್ದಾರೆ.

Writer - ಯೂಸುಫ್ ಎಂ. ಮುಂಡೋಳೆ

contributor

Editor - ಯೂಸುಫ್ ಎಂ. ಮುಂಡೋಳೆ

contributor

Similar News