×
Ad

ವೌಲ್ಯಾಂಕನ ಶುಲ್ಕ ಮನ್ನಾಗೊಳಿಸಲು ಪ್ರಯತ್ನ: ಸಚಿವ ಅಭಯ ಚಂದ್ರ ಜೈನ್

Update: 2016-02-27 14:37 IST

ಮಂಗಳೂರು: ಸರಕಾರವು ಅನುದಾನಿತ ಶಾಲೆಗಳಲ್ಲಿ ವೌಲ್ಯಾಂಕನ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದ್ದು, ಇದಕ್ಕಾಗಿ ಆಯಾ ಶಾಲೆಗಳಿಂದ ಪಡೆಯಲು ಉದ್ದೇಶಿಸಿರುವ 15,000 ರೂ. ಗಳನ್ನು ರದ್ದುಪಡಿಸುವ ನಿಟ್ಟಿನಲ್ಲಿ ಸದನದಲ್ಲಿ ಧ್ವನಿ ಎತ್ತುವುದಾಗಿ ಸಚಿವ ಅಭಯಚಂದ್ರ ಜೈನ್ ಹೇಳಿದರು.


ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇದರ ದ.ಕ.ಜಿಲ್ಲಾ ಶಾಖೆಯ ವತಿಯಿಂದ ಶನಿವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ‘ಕ್ಷ ಕಿರಣ-4’ ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಮಾವೇಶ ಮತ್ತು ಶೈಕ್ಷಣಿಕ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಸ್ವಾಭಿಮಾನದ ಬದುಕು ನಡೆಸುತ್ತಿರುವ ಶಿಕ್ಷಕರಿಗೆ ಸರಕಾರ ಸದಾ ಕಲಾ ಸ್ಪಂದನೆಯನ್ನು ನೀಡಲಿದೆ. ಈ ಹಿನ್ನೆಲೆಯಲ್ಲಿ ಜ್ಯೋತಿ ಸಂಜೀವಿನಿ ಯೋಜನೆಯನ್ನು ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.


ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಶಾಸಕ ಜೆ.ಆರ್.ಲೋಬೋ ಮಾತನಾಡಿ, ಯಾವುದೇ ಅನುದಾನ ಪಡೆಯದೇ ಅನೇಕ ಶಾಲೆಗಳಲ್ಲಿ ಶಿಕ್ಷಕರು ಕಳೆದ ಹಲವಾರು ವರ್ಷಗಳಿಂದ ಸೇವೆ ನೀಡುತ್ತಾ ಬಂದಿದ್ದಾರೆ. ಅವರ ಸಮಸ್ಯೆಗೂ ಸ್ಪಂದಿಸುವುದು ಅತಿಮುಖ್ಯ. ಶಿಕ್ಷಣ ವ್ಯಾಪಾರೀಕರಣದ ಹಾದಿ ಹಿಡಿದಿರುವ ಈ ಸಂದರ್ಭದಲ್ಲಿ ಗಂಭೀರವಾಗಿ ಯೋಚಿಸಬೇಕಾಗಿದೆ ಎಂದರು.


ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ಖಾಸಗಿ ಅನುದಾನಿತ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಇಲಾಖೆಯ ಅಧಿಕಾರಿಗಳು ಕೂಡ ಇದರಲ್ಲಿ ಭಾಗಿಯಾಗುತ್ತಿದ್ದು ಸರಕಾರಿ ಶಾಲೆಗಳನ್ನು ಮುಚ್ಚುವ ಷಡ್ಯಂತ್ರವಾಗುತ್ತಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗುವ ಬದಲು ಅನುದಾನಿತ ಶಾಲೆಗಳನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ನಾರ್ಬರ್ಟ್ ಪಿರೇರಾ, ಕೆ.ಕೆ.ಪೇಜಾವರ, ರಾಜ್ಯ ಪ್ರಶಸ್ತಿ ಪುರಸ್ಕೃತ ಸೋಮಶೇಖರ ಶೆಟ್ಟಿ, ಮುಖ್ಯ ಶಿಕ್ಷಕರಾದ ಪ್ರಸನ್ನ ಕುಮಾರ್ ಉಜಿರೆ, ಜಯಂತಿ ಕೆ. ಅವರನ್ನು ಸಮ್ಮಾನಿಸಲಾಯಿತು.


ಕ್ಯಾಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ಅ.ವಂ.ಜೆರಾಲ್ಡ್ ಡಿಸೋಜ ಸಮಾವೇಶ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಅನುದಾನಿತ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ಕೆ, ಕಾರ್ಯಾದರ್ಶಿ ಟಿ.ರವಿಕುಮಾರ್, ಬಳ್ಳಾರಿ ಘಟಕದ ಅಧ್ಯಕ್ಷ ರಾಮಣ್ಣ, ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸ್ಟ್ಯಾನಿ, ವಿದ್ಯಾಂಗ ಉಪನಿರ್ದೇಶಕ ಸಿಪ್ರಿಯನ್ ಮೊಂತೇರೊ, ನಿಕಟಪೂರ್ವ ವಿದ್ಯಾಂಗ ಉಪನರ್ದೇಶಕ ಮೋಸೆಸ್ ಜಯಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೇಷಶಯನ ಕಾರಿಂಜ, ಗೋವಿಂದ ಮಡಿವಾಳ, ಎಂ.ಪಿ.ಜ್ಞಾನೇಶ್, ರಾಧಾಕೃಷ್ಣ ರೈ ಉಪಸ್ಥಿತರಿದ್ದರು.


ಅನುದಾನಿತ ಪ್ರಾಥಮಿಕ ಸಂಘದ ದ.ಕ.ಜಿಲ್ಲಾಧ್ಯಕ್ಷ ಕೆ.ಎಂ.ಕೆ ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಚಾಲಕ ಕೆ.ಕೆ.ಪೇಜಾವರ ಹಾಗೂ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.


ಅನುದಾನಿತ ಶಿಕ್ಷಕರ ಬೇಡಿಕೆಗಳು
*ಅಧ್ಯಾಪಕರ ಮತ್ತು ಮಕ್ಕಳ ನಿಷ್ಪತ್ತಿ ಶಿಕ್ಷಣ ಹಕ್ಕು ಕಾಯ್ದೆಯಂತೆ ಅನುದಾನಿತ ಶಾಲೆಗಳಿಗೆ 1:30ರಂತೆ ಅಧ್ಯಾಪಕರ ನೇಮಕವಾಗಬೇಕು.


*ಉಚಿತ ಸಮವಸ್ತ್ರ, ಹೆಣ್ಣು ಮಕ್ಕಳ ಶುಲ್ಕ ವಿನಾಯತಿ, ಚಿಣ್ಣರ ಜಿಲ್ಲಾ ದರ್ಶನ ಅನುಷ್ಠಾನ, ಶಿಕ್ಷಕರ ನೇಮಕ, ಶುಲ್ಕ ರಹಿತ ವೌಲ್ಯಾಂಕನ ಪರೀಕ್ಷೆ, 8 ಸ್ಥಗಿತ ವೇತನ ಭಡ್ತಿ ಸಹಶಿಕ್ಷಕರಿಗೆ ನೀಡಲಾಗುವ 20, 25, 30 ವರ್ಷಗಳ ಹೆಚ್ಚುವರಿ ವೇತನ, ಭಡ್ತಿ ಮುಖ್ಯೋಪಾಧ್ಯಾಯರಿಗೂ ನೀಡಬೇಕು.


*ಜ್ಯೋತಿ ಸಂಜೀವಿನಿ ಯೋಜನೆ ಅನುದಾನಿತ ಶಾಲೆಗೂ ವಿಸ್ತರಣೆಯಾಗಬೇಕು.


*ಅನುದಾನಿತ ಶಾಲೆಗಳಲ್ಲಿ ವೌಲ್ಯಾಂಕನ ಪರೀಕ್ಷೆ ಶುಲ್ಕ ರಹಿತವಾಗಿ ನಡೆಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News