ಮಂಗಳೂರು ವಿವಿಯಲ್ಲಿ 2015-16ನೇ ಸಾಲಿನ ಸಮಾಜಶಾಸ್ತ್ರ ಸಂಘ ಉದ್ಘಾಟನೆ
ಕೊಣಾಜೆ: ಉತ್ತಮ ಜೀವನವನ್ನು ಕಂಡುಕೊಳ್ಳಲು ಮತ್ತು ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ನಮ್ಮಲ್ಲಿರುವ ಜ್ಞಾನ ಮತ್ತು ಕೌಶಲ್ಯ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ.ಬೋರೆಗೌಡ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಆಶ್ರಯದಲ್ಲಿ ಶನಿವಾರ ನಡೆದ 2015-16ನೇ ಸಾಲಿನ ಸಮಾಜಶಾಸ್ತ್ರ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ನಾವು ವಿದ್ಯಾರ್ಥಿ ಜೀವನದಲ್ಲೇ ಒಂದು ಉತ್ತಮ ಉದ್ದೇಶವನ್ನಿಟ್ಟುಕೊಂಡು ಮುನ್ನಡೆಯಬೇಕು ಮಾತ್ರವಲ್ಲದೆ ನಾವು ಕಲಿತ ವಿದ್ಯೆಯಿಂದ ಸಮಾಜಕ್ಕೆ ನಾವು ಕೂಡಾ ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದ ಅವರು ಸಮಾಜಶಾಸ್ತ್ರ ಸಂಘದ ಮೂಲಕ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ.ವಿನಯ್ ರಜತ್ ಅವರು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುವೆಂಪು ವಿಶ್ವವಿದ್ಯಾನಿಲಯದ ಸಹ ಪ್ರಾದ್ಯಾಪಕರಾದ ಡಾ.ಚಂದ್ರಶೇಖರ್, ಡಾ.ಆಂಜನಪ್ಪ, ಶಿಕಾರಿಪುರ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಶೇಖರ್, ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ.ಕಿರಣ್ ಪ್ರಸಾದ್, ರಶ್ಮೀ ಮುಂತಾದವರು ಉಪಸ್ಥಿತರಿದ್ದರು.