×
Ad

ಪೀಟರ್ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಸೆರೆ

Update: 2016-02-27 23:54 IST

ಬೆಳ್ತಂಗಡಿ, ಫೆ.27: ಕಕ್ಕಿಂಜೆ ಸಮೀಪ ತೋಟತ್ತಾಡಿ ಎಂಬಲ್ಲಿ ಆರೋಪಿ ಪೀಟರ್ ಎಂಬಾತನನ್ನು ಥಳಿಸಿ ಕೊಲೆ ಮಾಡಿದ ಪ್ರಕರಣದ ಕುರಿತಾದ ತನಿಖೆಯನ್ನು ಬೆಳ್ತಂಗಡಿ ಪೊಲೀಸರು ಮುಂದುವರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬ ರನ್ನು ವಶಕ್ಕೆ ಪಡೆಯಲಾಗಿರುವುದಾಗಿ ತಿಳಿದು ಬಂದಿದೆ. ಆದರೆ ಇವರು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆಯೇ ಅಥವಾ ಅಮಾಯಕರೆ ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳ ಬಗ್ಗೆಯೂ ಪೊಲೀಸರಿಗೆ ಸುಳಿವು ದೊರೆತಿದ್ದು, ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ನೇರವಾಗಿ ಭಾಗಿ


ಯಾದವರೆಲ್ಲರೂ ತಲೆ ಮರೆಸಿಕೊಂಡಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಕೆಲವರು ಮೊಬೈಲ್‌ಗಳಲ್ಲಿ ಚಿತ್ರೀಕರಿಸಿರುವ ದೃಶ್ಯಗಳು ಪೊಲೀಸರಿಗೆ ಲಭಿಸಿದ್ದು ಅದು ತನಿಖೆಗೆ ಸಹಕಾರಿಯಾಗುತ್ತಿದೆ. ಅಲ್ಲದೆ ಪೀಟರ್‌ನನ್ನು ಹಿಡಿದು ಕಟ್ಟಿಹಾಕಿ ಜನರ ಗುಂಪೊಂದು ಆತನನ್ನು ವಿಚಾರಣೆ ನಡೆಸುವುದರ ಆಡಿಯೋ ರೆಕಾರ್ಡಿಂಗ್ ಮಾಡಲಾಗಿದ್ದು ಅದರಲ್ಲಿ ಆತ ಕೆಲವೊಂದು ವಿಚಾರಗಳನ್ನು ಹೇಳಿದ್ದಾನೆ. ಅಲ್ಲದೆ ಆತನಲ್ಲಿ ಪ್ರಶ್ನೆ ಕೇಳುತ್ತಿರುವವರು ಯಾರು ಎಂಬುದು ಸ್ಪಷ್ಟವಾಗಿ ಗೊತ್ತಾಗುವಂತಿದೆ. ಪೀಟರ್‌ನಿಗೆ ಹಲ್ಲೆ ಮಾಡುವಾಗ ಕೆಲವರ ಹೆಸರನ್ನು ಹೇಳಿ ಹೊಡೆಯಬೇಡಿ ನಾನು ಹಾಗೆ ಮಾಡಿಲ್ಲ ಎಂದು ಹೇಳುವುದು ದಾಖಲಾಗಿದೆ. ಇದರಲ್ಲಿ ಹೆಸರಿರುವವರನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ನಡುವೆ ಕೆಲ ಪ್ರಮುಖರನ್ನು ತಪ್ಪಿಸುವ ಪ್ರಯತ್ನಗಳು ನಡೆಯುತ್ತಿದೆ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಶ್ರೀಮಂತರನ್ನು ಪ್ರಕರಣದಿಂದ ಬಿಡಿಸಿ ಕೆಲವರು ಬಡ ಕೂಲಿಕಾರ್ಮಿಕರನ್ನು ಮಾತ್ರ ಅದರಲ್ಲಿ ಸಿಲುಕಿಸಿ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿರುವ ಬಗ್ಗೆಯೂ ದೂರುಗಳು ಕೇಳಿಬರುತ್ತಿದೆ. ತಾಲೂಕನ್ನು ಬೆಚ್ಚಿ ಬೀಳಿಸಿದ ಈ ನೈತಿಕ ಪೊಲೀಸ್‌ಗಿರಿಯ ಬಗ್ಗೆ ಸರಿಯಾದ ತನಿಖೆ ನಡೆದು ಅಪರಾಧಿಗಳಿಗೆ ಶಿಕ್ಷೆಯಾಗಬೇಕಾದ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News